ಸಕ್ರೆಬೈಲು ಆನೆಗಳಿಗಾಗಿ ಮುತಗಾ ರೈತರ ಕಬ್ಬು ಕಳವು

ರೈತರ ಕಬ್ಬು ಕಳವು
Advertisement

ಬೆಳಗಾವಿ: ಚಿರತೆ ಸೆರೆ ಕಾರ್ಯಾಚರಣೆಗಾಗಿ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಿಂದ ಕರೆತಂದಿರುವ ಅರ್ಜುನ ಮತ್ತು ಅಲೆ ಆನೆಗಳ ಆಹಾರಕ್ಕಾಗಿ ಮುತಗಾ ರೈತರ ಎರಡು ಗುಂಟೆಯಲ್ಲಿ ಬೆಳೆದ ಮೂರು ಟನ್ ಕಬ್ಬನ್ನು ಅರಣ್ಯ ಅಧಿಕಾರಿಗಳು ಒಯ್ದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡ ಮುತಗಾದ ರೈತ ರಾಜು ಕಣಬರಕರ್, ಸಕ್ರೆಬೈಲ್ ಆನೆ ಶಿಬಿರದಿಂದ ಚಿರತೆ ಪತ್ತೆಗೆ ಬಂದ ಗಜಪಡೆಗೆ ತಮ್ಮ ಹೊಲದಲ್ಲಿ ಬೆಳೆದಿದ್ದ ಕಬ್ಬನ್ನು ಅಧಿಕಾರಿಗಳು ಹೇಳದೆ ಕೇಳದೆ ಕಟಾವು ಮಾಡಿ ಒಯ್ದಿದ್ದಾರೆ. ಈ ಬಗ್ಗೆ ತಮಗೆ ಕನಿಷ್ಠ ಮಾಹಿತಿ ನೀಡುವ ಸೌಜನ್ಯವನ್ನೂ ಅವರು ತೋರಿಸಿಲ್ಲ. ತಕ್ಷಣವೇ ನನ್ನ ಕಟಾವು ಮಾಡಿದ ಬೆಳೆಗೆ ಪರಿಹಾರ ನೀಡಬೇಕು. ಇಲ್ಲವಾದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಬೆಳೆದ ಬೆಳೆ ಕೈ ಸೇರದೆ ಸಾಕಷ್ಟು ಸಂಕಷ್ಟ ಅನುಭವಿಸಿದ ರೈತರು ಈ ಬಾರಿ ಬೆಳೆಯ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇದೀಗ ಅಧಿಕಾರಿಗಳು ಧಿಮಾಕಿನಿಂದ ತಮ್ಮ ಹೊಲದ ಬೆಳೆಯನ್ನು ಕಟಾವು ಮಾಡಿಕೊಂಡು ಹೋಗಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟವರಿಗೆ ಜಿಲ್ಲಾಡಳಿತ ಖಡಕ್ ಎಚ್ಚರಿಕೆ ನೀಡಿ, ತಮಗೆ ಪರಿಹಾರ ಪಾವತಿಸಬೇಕು ಎಂಬುದು ರೈತನ ಮನವಿಯಾಗಿದೆ.
ಇತ್ತ ಚಿರತೆ ಪತ್ತೆಯಾದ ಗಾಲ್ಫ್ ಮೈದಾನದ ಸುತ್ತಮುತ್ತಲ ಪ್ರದೇಶದಲ್ಲಿ ಕತ್ತಲ ಸಾಮ್ರಾಜ್ಯವೇ ಏರ್ಪಟ್ಟಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಇಲ್ಲಿನ ಬೀದಿ ದೀಪಗಳು ಉರಿಯುತ್ತಿಲ್ಲ. ಸಂಬಂಧಪಟ್ಟವರು ಈಗ ತಾತ್ಕಾಲಿಕವಾಗಿಯಾದರೂ ಬೆಳಕಿನ ವ್ಯವಸ್ಥೆ ಮಾಡಬೇಕು. ಈ ಪ್ರದೇಶದ ಜನರಿಗೆ ಕತ್ತಲಲ್ಲಿ ಓಡಾಡುವುದಕ್ಕೆ ಚಿರತೆಯ ಭಯ ಕಾಡುತ್ತಿದೆ ಎನ್ನುತ್ತಿದ್ದಾರೆ.

ರೈತರ ಕಬ್ಬು ಕಳವು