ಸಚಿವ ಚೆಲುವರಾಯಸ್ವಾಮಿಗೆ ಕಳಂಕ ತರಲು ಷಡ್ಯಂತ್ರ

Advertisement

ಮಂಡ್ಯ : ಸಚಿವ ಚೆಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ ಷಡ್ಯಂತ್ರ ರೂಪಿಸಿ ರಾಜ್ಯಪಾಲರಿಗೆ ಸುಳ್ಳು ದೂರು ನೀಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಶಾಸಕ ರಿಕುಮಾರ್ ಗಣಿಗ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಸಚಿವರಿಗೆ ಕಳಂಕ ತರುವ ವ್ಯವಸ್ಥಿತ ಷಡ್ಯಂತ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದ್ವೇಷದ ರಾಜಕಾರಣ ಮಾಡುತ್ತಿರುವ ಜೆಡಿಎಸ್ ನಾಯಕರು, ಸಚಿವ ಚೆಲುವರಾಯಸ್ವಾಮಿ ಜನಪ್ರಿಯತೆ ಸಹಿಸದ ಕುತಂತ್ರಿಗಳು,ಮಂಡ್ಯ ಜಿಲ್ಲೆಯ ಸ್ವಾಭಿಮಾನಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಧಿಕ್ಕಾರದ ಘೋಷಣೆ ಕೂಗಿದರು
ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಮಂಡ್ಯ ಜಿಲ್ಲೆಯ ಏಳು ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ನಕಲಿ ಸಹಿ ಬಳಸಿ ಇಲ್ಲ ಸಲ್ಲದ ಆರೋಪಗಳನ್ನು ಸೃಷ್ಟಿಸಿ ರಾಜ್ಯಪಾಲರಿಗೆ ದೂರು ನೀಡಿರುವುದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಸಚಿವರಿಗೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಕಳಂಕ ತರಲು ಕಿಡಿಗೇಡಿಗಳು ಸೃಷ್ಟಿಸಿರುವ ನಕಲಿ ಪತ್ರವಾಗಿದೆ ಎಂದು ದೂರಿದರು.
ದೂರು ಪತ್ರದಲ್ಲಿ ಬರೆದಿರುವಂತೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಸರಿನಲ್ಲಿರುವ ಕೆಲವು ಅಧಿಕಾರಿಗಳು ಆ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಇದರ ಹಿಂದೆ ರಾಜಕೀಯ
ಹುನ್ನಾರ ಅಡಗಿದ್ದು,ಚುನಾಯಿತ ಜನಪ್ರತಿನಿಧಿಗಳ ಮೇಲೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದೂರು ಸಲ್ಲಿಸಿ ಬ್ಲಾಕ್ ಮೇಲ್ ತಂತ್ರ ಬಳಸುವ ಮೂಲಕ ಜನಪ್ರತಿನಿಧಿಗಳನ್ನು ಬೆದರಿಸುವ ಬಹುದೊಡ್ಡ ಹುನ್ನಾರವಾಗಿದೆ. ಇದರ ಹಿಂದೆದೊಡ್ಡ ಚಾಲವೇ ಅಡಗಿದೆ. ಇಂತಹವರನ್ನು ಪತ್ತೆಹಚ್ಚಿಬಗ್ಗು ಬಡಿಯದಿದ್ದರೆ ಜನಪ್ರತಿನಿಧಿ ಮತ್ತು ದಕ್ಷ ಅಧಿಕಾರಿಗಳಿಗೆ ನಿರ್ಭೀತಿಯಿಂದ ಸಾರ್ವಜನಿಕರ ಸೇವೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಜನಪರ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಕಳೆದಿದ್ದು, ಕಾಂಗ್ರೆಸ್ ಪಕ್ಷ ಅನುಷ್ಠಾನಗೊಳ್ಳುತ್ತಿರುವ ಜನಪರ ಯೋಜನೆಗಳಿಂದ ಹತಾಶರಾಗಿರುವ ಕೆಲವು ರಾಜಕಾರಣಿಗಳು ಇಂತಹ ನೀಚ ಕೃತ್ಯದ
ಬೆನ್ನೆಲುಬಾಗಿ ನಿಂತಿರುವ ಸಂಶಯ ಇದ್ದು, ಹಾಗಾಗಿ ನಕಲಿ ಪತ್ರದ ಸೂತ್ರದಾರರನ್ನು ಪತ್ತೆಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನುಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ರವರಿಗೆ ಮನವಿ ಸಲ್ಲಿಸಿದರು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ಎಚ್.ಪಿ ರಾಮು, ಕೆ.ಬಿ ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿ ಗೌಡ, ಉಪಾಧ್ಯಕ್ಷ ಹಾಲಹಳ್ಳಿ ಅಶೋಕ್,ಮುಖಂಡರಾದ ಕೀಲಾರ ರಾಧಾಕೃಷ್ಣ,ಟಿ.ಎಸ್. ಸತ್ಯಾನಂದ, ಸಿ.ಎಂ. ದ್ಯಾವಪ್ಪ,ತ್ಯಾಗರಾಜ್, ಮುನಾವರ್ ಖಾನ್, ಡಾ. ಕೃಷ್ಣ,ರೇವಣ್ಣ, ಸುರೇಶ್ ಕಂಠಿ, ದೀಪಕ್, ಆನಂದ್ ಚಿಕ್ಕ ಮಂಡ್ಯ,ಅಂಜನಾ ಶ್ರೀಕಾಂತ್,ಶುಭದಾಯಿನಿ ತಗಹಳ್ಳಿ ಯಶೋಧ, ಅನುರಾಧ, ನಗರಸಭೆ ಸದಸ್ಯರಾದ ನಹಿಮ್, ಶ್ರೀಧರ್, ಎಂ.ಸಿ. ಶಿವಪ್ರಕಾಶ್ ಪವಿತ್ರ ಬೋರೇಗೌಡ, ಯುವ ಮುಖಂಡರಾದ ಸುಂಡಹಳ್ಳಿ ಮಂಜುನಾಥ್,ನವೀನ್ ಕುಮಾರ್, ವಿಜಯ್ ಕುಮಾರ್ ನೇತೃತ್ವ ವಹಿಸಿದ್ದರು.