ಸಚಿವ ಸ್ಥಾನ ಕೊಡುವ ನಿರ್ಧಾರ ಪ್ರಧಾನಿಯವರಿಗೆ ಬಿಟ್ಟಿದ್ದು

ಶೆಟ್ಟರ್‌
Advertisement

ಹುಬ್ಬಳ್ಳಿ: ಲೋಕಸಭೆಯಲ್ಲಿ ಜೂನ್ ೨೫ ಅಥವಾ ೨೬ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದೇನೆ. ದೊಡ್ಡ ಅಂತರದಿಂದಲೇ ನಾನು ಗೆದ್ದಿದ್ದೇನೆ. ಸಚಿವ ಸ್ಥಾನ ಕೊಡುವ ನಿರ್ಧಾರ ಪ್ರಧಾನಿ ನರೇಂದ್ರ ಮೋದಿಯವರಿಗೆ, ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದ್ದಾರೆ.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರು ದೊಡ್ಡ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಸಚಿವ ಸ್ಥಾನ ಸಿಗಬೇಕು ಎಂಬುದು ಕ್ಷೇತ್ರದ ಮತದಾರರ ಅಪೇಕ್ಷೆ. ಆದರೆ, ನಿರ್ಧಾರ ಪಕ್ಷಕ್ಕೆ ಬಿಟ್ಟಿದ್ದು ಎಂದರು.
ಯಡಿಯೂರಪ್ಪ ವಿರುದ್ಧ ರಾಜಕೀಯ ದ್ವೇಷ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ರಾಜ್ಯ ಕಾಂಗ್ರೆಸ್ ಷಡ್ಯಂತ್ರ ನಡೆಸಿದೆ. ಪ್ರಕರಣ ದಾಖಲಾದಾಗ ಗೃಹ ಸಚಿವರೇ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಹೇಳಿದ್ದರು. ಆದರೆ, ಈಗ ಸರ್ಕಾರದ ದುರಾಡಳಿತ, ಆಡಳಿತ ವೈಫಲ್ಯ, ವಾಲ್ಮೀಕಿ ಹಗರಣ ಲೋಪ ಮುಚ್ಚಿಕೊಳ್ಳಲು ಯಡಿಯೂರಪ್ಪ ಅವರ ವಿರುದ್ಧ ಷಡ್ಯಂತ್ರ ನಡೆಸಿರುವುದು ಖಂಡನೀಯ ಎಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಸಾಮಾನ್ಯ ವ್ಯಕ್ತಿಯೇ ಆಗಲಿ. ದರ್ಶನ್‌ನಂತಹ ನಟನೇ ಆಗಿರಲಿ. ಎಲ್ಲರಿಗೂ ಒಂದೇ ಇರಬೇಕು ಎಂದು ಶೆಟ್ಟರ ಹೇಳಿದರು.