ಸಜ್ಜನರ ಮಾತು ಬಲು ಸವಿ

Advertisement

ಒಳ್ಳೆಯ ಯುಕ್ತಿಗಳಿಂದ ಕೂಡಿರುವುವೂ, ಆಕರ್ಷಿಸುವ ಮಂತ್ರ ಸಮಾನವಾದವೂ ಆದ ಪುಣ್ಯವಂತರಾದ ಸಜ್ಜನರ ಮಾತುಗಳು. ಮನುಷ್ಯರಲ್ಲಿ ಹೇಗೆ ಪ್ರೀತಿಯನ್ನುಂಟು ಮಾಡುತ್ತವೆಯೋ ಹಾಗೆ ಬೇಗೆಗೊಳಗಾದವನನ್ನು ತಂಪಾದ ನೀರಿನ ಸ್ನಾನವಾಗಲೀ, ಮುತ್ತುಗಳ ಹಾರವಾಗಲೀ, ದೇಹದ ಸರ್ವಾಂಗಗಳಿಗೆ ಲೇಪಿಸಿದ ಶ್ರೀಗಂಧವಾಗಲೀ ಸುಖವನ್ನುಂಟು ಮಾಡುವುದಿಲ್ಲ.
ಪವಿತ್ರ ಕಾರ್ಯದಲ್ಲಿ ತೊಡಗು: ಐಶ್ವರ್ಯವು ನೀರಿನ ಗುಳ್ಳೆಯಂತೆ ಕ್ಷಣಭಂಗುರ. ದೇಹವು ದೀಪದಂತೆ ಅಸ್ಥಿರ. ತಾರುಣ್ಯವು ಯುವತಿಯ ನೋಟದಂತೆ ಚಂಚಲ. ಭುಜಬಲವು ಮಿಂಚಿನಂತೆ ಕ್ಷಣದಲ್ಲಿ ನಶಿಸತಕ್ಕದ್ದು. ಎಲೈ ಜೀವವೇ, ಗುರುವಿನ ಅನುಗ್ರಹವನ್ನು ಪಡೆದು ಏನಾದರೂ ಪುಣ್ಯ ಕಾರ್ಯವನ್ನು ಬೇಗನೆ ಮಾಡು. ದಾನ, ಧ್ಯಾನ, ತಪಸ್ಸು ಇತ್ಯಾದಿ ಪವಿತ್ರ ಕಾರ್ಯವನ್ನು ಮಾಡಬೇಕೆನ್ನುತ್ತಿದೆ ಸುಭಾಷಿತ.
ತುಂಬೆಗಿಡ ಆದರ್ಶವಾಗಲಿ: ಒಣಗಿದ ತುಂಬೆಗಿಡ ಬೆಂಕಿಯಲ್ಲಿ ಹಾಕಿದರೆ ಕ್ಷಣಕಾಲವಿದ್ದರೂ ಪಟ ಪಟ ಶಬ್ದ ಮಾಡುತ್ತದೆ. ಬೆಳಕು ನೀಡುತ್ತದೆ. ಆರೋಗ್ಯಕರ ಹೊಗೆ ನೀಡುತ್ತದೆ. ಬೆಂಕಿಯಾಗಿ ಶಾಖವನ್ನು ನೀಡುತ್ತದೆ.
ಅದೇ ಹೊಟ್ಟಿಗೆ ಬೆಂಕಿ ಇಟ್ಟರೆ ಜ್ಯೋತಿ, ಆರೋಗ್ಯ, ಶಾಖಾ ಯಾವುದೂ ಇಲ್ಲ. ಬೆಂಕಿಯೂ ಬೇಗ ಆರುವುದೂ ಇಲ್ಲ. ಹತ್ತಾರು ಗಂಟೆ ಹೊಗೆಯಾಡಿ ಎಲ್ಲರ ಕಣ್ಣನ್ನು ಉರಿಸುತ್ತದೆ. ಜೀವನದಲ್ಲಿ ಎಷ್ಟು ಕಾಲ ಬದುಕಿದ್ದೇನೆ ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ. ಬದುಕುವುದು ಸಾರ್ಥಕತೆಯಲ್ಲ. ಸಾರ್ಥಕತೆ ಪಡೆಯುವುದು ಬದುಕು. ನಮ್ಮ ಜೀವನಕ್ಕೆ ತುಂಬೆ ಗಿಡವೂ ಆದರ್ಶವಾಗಲಿ ಹೊರತು ಹೊಟ್ಟಲ್ಲ.