ಸತ್ಯ ಹೇಳಿ ರಾಜಕೀಯ ಲಾಭವನ್ನು ಪಡೆಯುವ ಪ್ರಯತ್ನ ಮಾಡಿ

Advertisement

ಬೆಂಗಳೂರು: ನಾವು ಸತ್ಯ ಹೇಳಿ ರಾಜಕೀಯ ಲಾಭವನ್ನು ಪಡೆಯುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಅಪಹಾಸ್ಯ, ಅವಹೇಳನ ಮಾಡಿದವರೇ ಈಗ ಮೋದಿ ಗ್ಯಾರಂಟಿ ಎಂದು ಶುರು ಮಾಡಿದ್ದಾರೆ. ನಾವು ಜನರಿಗೆ ಸತ್ಯವನ್ನು ಹೇಳಬೇಕು. ಭಾರತದ ಇತಿಹಾಸದಲ್ಲಿ ಯಾವ ಸರ್ಕಾರವೂ ಈ ರೀತಿಯ ಗ್ಯಾರಂಟಿಗಳನ್ನು ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ. ಇದರಿಂದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಲು ಸಾಧ್ಯವಾಗುತ್ತದೆ. ದಲಿತರು, ಹಿಂದುಳಿದವರು, ಮಹಿಳೆಯರಿಗೆ ಅನುಕೂಲವಾಗಲಿದೆ. ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದರು.
ಅಪಪ್ರಚಾರ ಮಾಡುವುದನ್ನು ಬಿಡಬೇಕು:
ಸರ್ಕಾರದಲ್ಲಿ ಹಣವಿಲ್ಲ ಎನ್ನುವ ಅಪಪ್ರಚಾರವನ್ನು ಸೋಲಿಸಿ. ಇಷ್ಟು ದೊಡ್ಡ ದೊಡ್ಡ ಕಾರ್ಯಕ್ರಮಗಳು ಹಣವಿಲ್ಲದೆ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ ಸಿಎಂ, ನಮ್ಮವರೇ ಬಿಜೆಪಿಯವರ ಅಪಪ್ರಚಾರವನ್ನು ಸೋಲಿಸಲು ಮುಂದಾಗಬೇಕು. ಮಾರ್ಚ್ ಒಳಗೆ ಎಲ್ಲಾ ಶಾಸಕರಿಗೆ 25 ಕೋಟಿ ರೂ.ಗಳ ಕೆಲಸ ನೀಡಲು ಸೂಚಿಸಿದ್ದೇನೆ ಎಂದರು.
ಬರಗಾಲ ಪೀಡಿತವಾಗಿದ್ದರೂ ಮೇವಿಗೆ, ಕುಡಿಯುವ ನೀರಿಗೆ ತೊಂದರೆಯಾಗಿಲ್ಲ:
ಗ್ಯಾರಂಟಿ ಜಾರಿಯಾಗಿರದಿದ್ದರೆ ಬರಗಾಲದ ಹಾಹಾಕಾರ ಎದ್ದಿರುತಿತ್ತು. ರಾಜ್ಯದ 223 ತಾಲ್ಲೂಕುಗಳು ಬರಗಾಲ ಪೀಡಿತವಾಗಿದ್ದರೂ ಮೇವಿಗೆ, ಕುಡಿಯುವ ನೀರಿಗೆ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತೊಂದರೆಯಾಗಿಲ್ಲ ಎಂದರು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಾವು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ, ಈವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ಕರೆದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರ ಕೊಡುವವರೆಗೆ ಕಾಯಬಾರದು ಎಂದು 2000 ರೂ. ವರೆಗೆ ರೈತರಿಗೆ ಇನ್ ಪುಟ್ ಸಬ್ಸಿಡಿ ಪರಿಹಾರ ಪ್ರಾರಂಭಿಸಲಾಗಿದೆ ಎಂದರು.