ಸನಾತನ ಧರ್ಮವನ್ನು ರೋಗಕ್ಕೆ ಹೋಲಿಕೆ ಮಾಡುವುದೇ ರೋಗ

ಬಸವರಾಜ ಬೊಮ್ಮಾಯಿ
Advertisement

ಬೆಂಗಳೂರು: ರೈತರ ಆತ್ಮಹತ್ಯೆ ಕುರಿತು ಕಾಂಗ್ರೆಸ್ ಸಚಿವರ‌ ಹೇಳಿಕೆಗಳು ರೈತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಮಾಡಕೊಂಡ ರೈತರಿಗೆ ಪರಿಹಾರ ಹೆಚ್ಚಿಗೆ ಮಾಡಿದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ‌ ಪಾಟೀಲ್ ಹೇಳಿಕೆ ನೀಡಿರುವುದು ಖಂಡನೀಯ. ಈ ಸರ್ಕಾರ ಬಂದ ಮೇಲೆ ರೈತ ವಿರೋಧಿ ನೀತಿ ಅನುಸರಿಸುತ್ತ ಬಂದಿದ್ದಾರೆ.
ಜೂನ್, ಜುಲೈ ತಿಂಗಳಲ್ಲಿ ಮಳೆ ಆಗಿಲ್ಲ. ಬರಗಾಲ ಘೋಷಣೆ ಮಾಡಲು ಮೀನ ಮೇಷ ಎಣಿಸುತ್ತಿದ್ದಾರೆ. ಬರಗಾಲ ಘೋಷಣೆ ಆದರೆ, ಹೊಸ ಸಾಲ ಕೊಡಬೇಕು, ಬೆಳೆ ಪರಿಹಾರ ನೀಡಬೇಕು ಎಂದು ಹೇಳಿದರು.
ರೈತ ದುಡ್ಡಿಗಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಅನ್ನುವುದು ಅಮಾನವೀಯ. ಯಾರೂ ಕೂಡ ದುಡ್ಡಿಗಾಗಿ ತಮ್ಮ ಜೀವ ತ್ಯಾಗ ಮಾಡುವುದಿಲ್ಲ. ಇದು ಅವರ ರೈತ ವಿರೋಧಿ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು.
ಯಾರಾದರೂ ತೀರಿಕೊಂಡರೆ ಸಂಪೂರ್ಣ ತನಿಖೆ ಆಗುತ್ತದೆ. ಸಂಪೂರ್ಣ ಪರಿಶೀಲನೆ ಮಾಡಿದ ನಂತರವೇ ಹಣ ಬಿಡುಗಡೆ ಆಗುತ್ತದೆ. ಇದೆಲ್ಲ ಇದ್ದರೂ ಹಣಕ್ಕಾಗಿಯೇ ಸಾಯುತ್ತಾರೆ ಅನ್ನುವುದು ಎಲ್ಲಿ ಪ್ರಶ್ನೆ ಬರುತ್ತದೆ. ರಾಜ್ಯದಲ್ಲಿ ಮೂರು ತಿಂಗಳಲ್ಲಿ 172 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೂಡಲೇ ಅವರಿಗೆ ಪರಿಹಾರ ಕೊಡಬೇಕು. ಕೃಷಿ ಇಲಾಖೆ ರೈತರಿಗೆ ಕೌನ್ಸಿಲಿಂಗ್ ಮಾಡಬೇಕು ಎಂದು ಆಗ್ರಹಿಸಿದರು.
ದೀರ್ಘಾವಧಿ ಸಾಲಕ್ಕೆ ಪರಿವರ್ತಿಸಬೇಕು
ಮುಂಗಾರು ಮುಗಿಯುತ್ತ ಬಂದಿದೆ. ರೈತರು ಎರಡು ಮೂರು ಬಾರಿ ಬಿತ್ತನೆ ಮಾಡಿದರೂ ಯಾವುದೇ ಬೆಳೆ ಬಂದಿಲ್ಲ. ರೈತರು ಮಾಡಿಕೊಂಡ ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಸಲುಕಿದ್ದಾನೆ. ಸಹಕಾರ ಸಂಘಗಳ ಮೂಲಕ ರೈತರಿಗೆ ಸುಮಾರು 25 ಸಾವಿರ ಕೋಟಿ ರೂ ಸಾಲ ನೀಡುವ ಗುರಿ ಇಟ್ಟುಕೊಂಡಿದ್ದಾರೆ. ಆದರೆ, ಇದುವರೆಗೂ ಕೇವಲ 7 ಸಾವಿರ ಕೋಟಿ ರೂ. ಮಾತ್ರ ಸಾಲ ನೀಡಿದ್ದಾರಡ. ರೈತರಿಗೆ ಹೆಚ್ಷಿನ ಪ್ರಮಾಣದಲ್ಲಿ ಸಾಲ ನೀಡಬೇಕು. ರೈತರಿಗೆ ನೀಡಿರುವ ಅಲ್ಪಾವಧಿ ಹಾಗೂ ಮಧ್ಯಮಾವಧಿ ಬೆಳೆ ಸಾಲವನ್ನು ದೀರ್ಗಾವಧಿ ಸಾಲವನ್ನಾಗಿ ಪರಿವರ್ತನೆ ಮಾಡಬೇಕು. ಕೃಷಿ ಇಲಾಖೆ ಸಕ್ರೀಯವಾಗಿ ರೈತರಿಗೆ ಕೌನ್ಸೆಲಿಂಗ್ ಮಾಡಬೇಕು ಎಂದು ಒತ್ತಾಯಿಸಿದರು.
ಸನಾತನ ಧರ್ಮದ ಅಪಮಾನ ಹಿಡನ್ ಅಜೆಂಡಾ
ಸನಾತನ ಧರ್ಮ ಎಲ್ಲಿ ಯಾವಾಗ ಹುಟ್ಟಿತು ಅನ್ನವುದೇ ಗೊತ್ತಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ನೀಡಿರುವ ಹೇಳಿಕೆಯನ್ನು ಖಂಡಿಸಿದ ಅವರು, ಪರಮೇಶ್ವರ ಅವರು ದಯವಿಟ್ಟು ವೇದ ಉಪನಿಷತ್ತು ಓದಿಲ್ಲ, ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡಲಿ. ಇದೊಂದು ತುಷ್ಟೀಕರಣದ ರಾಜಕಾರಣವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂದರು.
ರೋಗಕ್ಕೆ ಹೋಲಿಕೆ ಮಾಡುವುದೇ ರೋಗ
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅತ್ಯಂತ ಕೆಟ್ಟ ರೀತಿಯಲ್ಲಿ ಹೇಳಿಕೆ ನೀಡಿದ್ದು, ಧರ್ಮವನ್ನು ರೋಗಕ್ಕೆ ಹೋಲಿಕೆ ಮಾಡುವುದೇ ಒಂದು ರೋಗ, ಇಂಡಿಯಾ ಒಕ್ಕೂಟದ ಕೆಲವರಿಗೆ ಸ್ಟಾಲಿನ್ ಹೇಳಿಕೆ ಅಪಥ್ಯವಾಗಿದೆ. ಆದರೆ, ಇದು ಇಂಡಿಯಾ ಒಕ್ಕೂಟಕದ ಹಿಡನ್ ಅಜೆಂಡಾ ಆಗಿದೆ ಎಂದು ಹೇಳಿದರು.
ಭಾರತ ನಾಮಕರಣಕ್ಕೆ ಪ್ರತಿಪಕ್ಷಗಳಿಂದ ಏಕೆ ವಿರೋಧ?
ರಿಪಬ್ಲಿಕ್ ಆಫ್ ಇಂಡಿಯಾ ಹೆಸರನ್ನು ಕೇಂದ್ರ ಸರ್ಕಾರ ರಿಪಬ್ಲಿಕ್ ಆಫ್ ಭಾರತ ಎಂದು ಮರುನಾಮಕರಣ ಮಾಡುತ್ತಿರುವುದಕ್ಕೆ ಪ್ರತಿಪಕ್ಷಗಳು ಏಕೆ ವಿರೋಧ ವ್ಯಕ್ತಪಡಿಸುತ್ತಿವೆ ಅನ್ನುವುದು ಅರ್ಥವಾಗುತ್ತಿಲ್ಲ. ಹಿಮಾಲಯ ಪರ್ವತದಿಂದ ಹಿಡಿದು ಸಮುದ್ರದವರೆಗಿನ ಪ್ರದೇಶವನ್ನು ಭಾರತ ಅಂತಲೇ ಕರೆಯಲಾಗುತ್ತದೆ. ಬ್ರಿಟೀಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಭಾರತ ಸೇರಿದಂತೆ ಅನೇಕ ನಗರಗಳ ಹೆಸರುಗಳನ್ನು ಬದಲಾಯಿಸಿದ್ದರು. ಚೆನೈ, ಕೋಲ್ಕತ್ತಾ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ನಗರಗಳ ಹೆಸರುಗಳನ್ನು ತಮ್ಮ ಉಚ್ಚಾರಣೆಗೆ ತಕ್ಕಂತೆ ಬದಲಾಯಿಸಿಕೊಂಡಿದ್ದರು. ಅವುಗಳನ್ನು ಈಗ ಮೂಲ ಹೆಸರುಗಳಾಗಿ ಬದಲಾಯಿಸಿಕೊಳ್ಳಲಾಗಿದೆ. ಅದೇ ರೀತಿ ಇಂಡಿಯಾವನ್ನು ಭಾರತ ಎಂದು ಬದಲಾಯಿಸುವುದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟರು.