ದಾವಣಗೆರೆ: ಸನಾತನ ಧರ್ಮದ ಶುದ್ಧೀಕರಣ ಆಗಬೇಕಿದೆಯೆನ್ನುವ ಮೂಲಕ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ನೆರೆಯ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಉದಯಿನಿಧಿ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮದಲ್ಲಿ ಶೂದ್ರರಿಗೆ ಓದುವುದನ್ನು ಕಲಿಸಿರಲಿಲ್ಲ. ಲಾರ್ಡ್ ಮೆಕಾಲೆ ಬಂದ ನಂತರ ಎಲ್ಲರೂ ವ್ಯಾಪಕವಾಗಿ ವಿದ್ಯೆ ಕಲಿತರು. ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ ಹೇಗೆ ಇಂಗ್ಲೀಷ್ ಓದುತ್ತಿದ್ದರು ಎಂದರು. ಶೂದ್ರರು ತಮ್ಮ ಮಕ್ಕಳನ್ನು ಓದಿಸಿದರೆ ಕಾಯಿಸಿದ ಎಣ್ಣೆಯನ್ನು ಬಿಡುತ್ತಿದ್ದರು. ಯಾಕೆ ಹೀಗೆ ಮಾಡುತ್ತಿದ್ದರು? ಅದಕ್ಕಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಮನುವಾದವನ್ನು ಸುಟ್ಟು ಹಾಕಿದ್ದರು. ಭಾರತದ ನೆಲದಲ್ಲಿ ಯಾವುದೇ ಧರ್ಮವೂ ಮೇಲಲ್ಲ. ಎಲ್ಲ ಧರ್ಮಗಳೂ ಭಾರತದ ಸಂವಿಧಾನದಡಿಯೇ ಬರುತ್ತವೆ. ಸಂವಿಧಾನ ಪೀಠಿಕೆ ಜಾಹೀರಾತನ್ನು ನಾವು ನೀಡಿದ್ದೆವು ಗೊತ್ತಾ? ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂಬ ಉದ್ದೇಶ ಅದಾಗಿತ್ತು ಎಂದು ಅವರು ತಿಳಿಸಿದರು. ಒನ್ ನೇಷನ್, ಒನ್ ಎಲೆಕ್ಷನ್ ಹೇಗೆ ಸಾಧ್ಯ ಆಗುತ್ತೇರಿ? ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸವಾಗಿದೆ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ಹೇಗೆ ಸಾಧ್ಯವಾಗುತ್ತದೆ? ವಿಧಾನಸಭೆ ಚುನಾವಣೆ ಆಗಿ ಮೂರು ತಿಂಗಳಷ್ಟೇ ಕಳೆದಿದೆ. ಮತ್ತೆ ಅಂತಹವರ ಜೊತೆ ಹೋಗು ಅಂದರೆ ಹೇಗೆ ಎಂದು ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಎಲೆಕ್ಷನ್ ನಿಲುವಿಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.