ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ
ಸರಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸಲಿ

ಅಶೋಕ ಹಾರನಹಳ್ಳಿ
Advertisement

ಹಾವೇರಿ(ಪಾಪು-ಚಂಪಾ ವೇದಿಕೆ): ಕನ್ನಡ ಭಾಷೆ ಬೆಳವಣಿಗೆಗೆ ಹಾಗೂ ಕನ್ನಡಿಗರ ಏಳಿಗೆಗಾಗಿ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ರಾಜ್ಯ ಸರಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಕಾನೂನು ತಜ್ಞ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಅಶೋಕ ಹಾರನಹಳ್ಳಿ ಅವರು ಹೇಳಿದರು.
ಅವರು “ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ’ ಗೋಷ್ಠಿಯಲ್ಲಿ “ಸಮಗ್ರ ಕನ್ನಡ ಅಭಿವೃದ್ಧಿ ವಿಧೇಯಕ’ ಕುರಿತು ಮಾನಾಡಿದರು. ಕನ್ನಡ ಭಾಷೆಯ ಬಗ್ಗೆ ಕಾಳಜಿ ತೋರುವ ಸರಕಾರ ಅಧಿಕಾರಾವಧಿಯ ಕೊನೆಯ ಅಧಿವೇಶನದಲ್ಲೂ ಕನ್ನಡ ಅಭಿವೃದ್ಧಿ ವಿಧೇಯಕ ಕುರಿತು ನಿರ್ಣಯ ಕೈಗೊಳ್ಳಲಿಲ್ಲ. ೧೯೬೮ರ ರಾಜ್ಯ ಭಾಷೆ ವಿಧೇಯಕಕ್ಕೆ ಪರ್ಯಾಯವಾಗಿ ಸಮಗ್ರ ಕನ್ನಡ ಅಭಿವೃದ್ಧಿ ವಿಧೇಯಕ ಕುರಿತು ಸುಗ್ರಿವಾಜ್ಞೆ ಹೊರಡಿಸಬೇಕು. ಕೇವಲ ಆಶ್ವಾಸನೆ ನೀಡಿದರೆ ಸಾಲದು, ಚುನಾವಣೆಗೆ ಮುಂಚೆ ಸುಗ್ರೀವಾಜ್ಞೆ ಆಗಬೇಕು. ಈ ದಿಸೆಯಲ್ಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದರು.
ಮನೆಯಲ್ಲಿ ಮಾತನಾಡುವ ಭಾಷೆಯನ್ನು ಶಾಲೆಯಲ್ಲಿ ಕಲಿಸುವುದಕ್ಕೆ ಪಾಲಕರು ವಿರೋಧ ವ್ಯಕ್ತಪಡಿಸುತ್ತಿರುವುದು ದೌರ್ಭಾಗ್ಯದ ಸಂಗತಿ. ಎಲ್ಲಿಯವರೆಗೆ ನಮಗೆ ಕನ್ನಡದ ಬಗ್ಗೆ ಗೌರವ ಇರುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಬೆಳೆಯಲು ಸಾಧ್ಯವಿಲ್ಲ. ಮಕ್ಕಳು ಎಷ್ಟಾದರೂ ಭಾಷೆಗಳನ್ನು ಕಲಿಯಲಿ ಆದರೆ ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕನ್ನಡಕ್ಕೆ ಸಂಸ್ಕೃತದಿಂದ ಅಪಾಯವಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಕನ್ನಡಕ್ಕೆ ಸಂಸ್ಕೃತಕ್ಕಿಂತ ಹೆಚ್ಚು ಇಂಗ್ಲೀಷ ಭಾಷೆಯಿಂದ ಅಪಾಯ ಉಂಟಾಗಿದೆ. ಆಯೋಗದ ವರದಿಗಳನ್ನಿಟ್ಟುಕೊಂಡು ಕೂತರೇ ಯಾವುದೇ ಪ್ರಯೋಜನವಿಲ್ಲ. ಕಾನೂನು ಮಾಡಿದರೆ ಮಾತ್ರ ಅನುಕೂಲವಾಗುತ್ತದೆ ಅಶೋಕ ಹಾರನಹಳ್ಳಿ ಹೇಳಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಿದರೆ ಮಾತ್ರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಸರಕಾರ ಸ್ಪಷ್ಟಪಡಿಸಬೇಕು. ಕನ್ನಡ ಶಾಲೆ ನಡೆಸುವ ಸಂಸ್ಥೆಗಳಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಂತೆ ರೂಪಿಸಬೇಕು. ಕನ್ನಡ ಹೋರಾಟಗಾರರು ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಧ್ವನಿ ಎತ್ತಬೇಕು. ಸರಕಾರ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಕನ್ನಡ ಶಾಲೆಗಳನ್ನು ಬಲಯುತಗೊಳಿಸಬೇಕು. ಖಾಸಗಿ ಶಾಲೆಗಳ ಲೀಸ್ ಮುಂದುವರೆಸಲು ಕನ್ನಡ ಮಾಧ್ಯಮದಲ್ಲಿ ಬೋಧನೆ ಕಡ್ಡಾಯಗೊಳಿಸಬೇಕು. ಆಗ ಮಾತ್ರ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸಲು ಮುಂದಾಗುತ್ತಾರೆ ಎಂದು ನುಡಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ “ಹಾವನೂರ ವರದಿಗೆ ೫೦ ವರ್ಷ’ ಕುರಿತು ಮಾತನಾಡಿ, ಹಿಂದುಳಿದ ವರ್ಗಗಳ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು ಕಾರಣಕರ್ತರಾದ ಎಲ್.ಜಿ. ಹಾವನೂರ ಕೇವಲ ನಮ್ಮ ರಾಜ್ಯಕ್ಕಷ್ಟೇ ಸೀಮಿತರಲ್ಲ, ಇಡೀ ದೇಶಕ್ಕೆ ಮಾರ್ಗದರ್ಶನ ಮಾಡಿದ ಮಹಾನ್ ವ್ಯಕ್ತಿ ಎಂದರು.
ಎಲ್.ಜಿ. ಹಾವನೂರ ತಮ್ಮ ವರದಿಯಲ್ಲಿ ಎಲ್ಲ ಹಂತದ ಶಿಕ್ಷಣದಲ್ಲೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲು ಸಲಹೆ ನೀಡಿದರು. ಇದೇ ಕಾರಣಕ್ಕೆ ಹಾವನೂರ ವರದಿಯನ್ನು ಹಿಂದುಳಿದ ವರ್ಗಗಳ ಬೈಬಲ್ ಎಂದು ಸರ್ವೋಚ್ಚ ನ್ಯಾಯಾಲಯ ಕೂಡ ಅಭಿಪ್ರಾಯಪಟ್ಟಿದೆ ಎಂದು ತಿಳಿಸಿದರು.
ಹಾವನೂರ ವರದಿಯಿಂದಾಗಿ ಹಿಂದುಳಿದ ವರ್ಗದ ಸಹಸ್ರಾರು ಜನರು ಉನ್ನತ ಶಿಕ್ಷಣ ಪಡೆದು ಉನ್ನತ ಹಂತದಲ್ಲಿ ಉದ್ಯೋಗ ಪಡೆದುಕೊಂಡರು. ದೇಶ ಇಂಥ ಅಪರೂಪದ ವ್ಯಕ್ತಿ ಬಗ್ಗೆ ಗೌರವ ಪಡಬೇಕು. ಮಕ್ಕಳು ಹಾವೇರಿ ಜಿಲ್ಲೆಯ ಹಾವನೂರ ಅವರ ಜೀವನ ಸಾಧನೆ ಕುರಿತು ತಿಳಿದುಕೊಳ್ಳಬೇಕೆಂದರು.