ಸಮುದಾಯ ಬಿತ್ತನೆ ಬೀಜ ಬ್ಯಾಂಕ್ ಸ್ಥಾಪನೆ ಸಿರಿಧಾನ್ಯ ಮಾರಾಟ ಪ್ರೋತ್ಸಾಹಕ್ಕೆ ಮಿಲ್ಲೆಟ್

Advertisement

ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭ ದಾಯಕವಾಗಿಸುವ ಉದ್ದೇಶದಿಂದ ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ, ಸಮಗ್ರ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿಗೆ ಸರಕಾರ ಘೋಷಿಸಿದೆ.
ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಅನುವಾಗುವಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುವುದು. ಹಿಂದಿನ ಅವಧಿಯಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಕೃಷಿ ಭಾಗ್ಯ ಯೋಜನೆಯನ್ನು ಮರುಜಾರಿಗೊಳಿಸಲಾಗಿದೆ. ಕಳೆದ ವರ್ಷ ೨೦೦ ಕೋಟಿ ರೂ.ಗಳ ಅನುದಾನ ಒದಗಿಸಲಾಗಿದ್ದು, ಪ್ರಸಕ್ತ ವರ್ಷವೂ ಮುಂದುವರಿಯಲಿದೆ. ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಒಂದು ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆಗೆ ಸರಕಾರ ಮುಂದಾಗಿದೆ.
ನಮ್ಮ ಮಿಲ್ಲೆಟ್ ಎಂಬ ಹೊಸ ಯೋಜನೆಯಡಿಯಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಅಗ್ರಿ-ಟೆಕ್ ಕಂಪನಿಗಳು ಮತ್ತು ರಿಟೇಲ್ ಚೈನ್‌ಗಳ ಸಹಭಾಗಿತ್ವದೊಂದಿಗೆ ಕೈಗೆಟುಕುವ ದರದಲ್ಲಿ ದೊರಕಲಿವೆ. ರಾಜ್ಯದ ಬರಪೀಡಿತ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಗಾಗಿ ಪ್ರತಿವರ್ಷ ೧,೦೦೦ದಂತೆ ಒಟ್ಟು ೫,೦೦೦ ಸಣ್ಣ ಸರೋವರಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಲಾಗುತ್ತದೆ. ಬೆಂಗಳೂರಿನಲ್ಲಿರುವ ಕೃಷಿ ಇಲಾಖೆಯ ಆರ್.ಕೆ. ಶಾಲಾ ಕೃಷಿ ಕ್ಷೇತ್ರವನ್ನು ಕೃಷಿಗೆ ಸಂಬಂಧಿಸಿದ ತಾಂತ್ರಿಕತೆಗಳನ್ನು ಪಸರಿಸುವ ಜ್ಞಾನ ಕೇಂದ್ರವನ್ನಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ರೈತರಿಗೆ ಕೀಟ, ರೋಗ ಮತ್ತು ಪೋಷಕಾಂಶ ನಿರ್ವಹಣೆಯ ಸಲಹೆ ನೀಡಲು ರಾಯಚೂರು ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿರುವ ಇ-ಸ್ಯಾಪ್ ತಂತ್ರಾಂಶದ ಸೌಲಭ್ಯವನ್ನು ಎಲ್ಲಾ ರೈತರಿಗೆ ಪರಿಚಯಿಸಲಾಗುವುದು. ಆಹಾರ ಸಂಸ್ಕರಣಾ ವಲಯವು ರೈತರ ಆದಾಯ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಬೆಳೆಗಳಿಗೆ ಸಮರ್ಪಕ ಬೆಲೆ ದೊರಕಿಸುವ ಸಲುವಾಗಿ ಕೃಷಿ ಇಲಾಖೆಯ ಅಧೀನದಲ್ಲಿ ಪ್ರತ್ಯೇಕ ಆಹಾರ ಸಂಸ್ಕರಣಾ ಆಯುಕ್ತಾಲಯ ಘೋಷಿಸಲಾಗಿದೆ.ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್) ಸಂಸ್ಥೆಗೆ ೮೦ ಕೋಟಿ ರೂ. ಒದಗಿಸಲಾಗುವುದು. ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತನ್ನು ಉತ್ತೇಜಿಸಲು ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಹತ್ತಿರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ಗಳನ್ನು ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ ಮತ್ತು ಬೆಂಗಳೂರು ಗ್ರಾಮಾಂತರದ ಪೂಜೇನಹಳ್ಳಿಯಲ್ಲಿ ಸ್ಥಾಪಿಸಲಾಗುವುದು.
ಸಣ್ಣ ನೀರಾವರಿಗೆ ಕಾಯಕಲ್ಪ
ಸಣ್ಣ ನೀರಾವರಿ ಇಲಾಖೆಯಿಂದ ಕುಡಿಯುವ ನೀರು, ಕೃಷಿ ಹಾಗೂ ಕೈಗಾರಿಕೆಗಳಿಗೆ ನೀರನ್ನು ಸಮರ್ಪಕವಾಗಿ ಪೂರೈಸಲು ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಂ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್‌ನಂತಹ ೧೧೫ ಕಾಮಗಾರಿಗಳನ್ನು ೨೦೦ ಕೋಟಿ ರೂ. ನಿಗದಿ. ಪ್ರಗತಿಯಲ್ಲಿರುವ ೪೫೫ ಕೋಟಿ ರೂ. ಮೊತ್ತದ ಕೆ.ಸಿ ವ್ಯಾಲಿ ೨ನೇ ಹಂತದ ಉದ್ದೇಶಿತ ೨೭೨ ಕೆರೆ ತುಂಬಿಸುವ ಯೋಜನೆ ಪೂರ್ಣ. ರಾಯಚೂರು ಜಿಲ್ಲೆಯ ಚಿಕ್ಕಲಪರ್ವಿ ಹತ್ತಿರ ತುಂಗಭದ್ರಾ ನದಿಗೆ ಬಿ.ಸಿ.ಬಿ ನಿರ್ಮಾಣ, ಮಾನ್ವಿ ತಾಲ್ಲೂಕಿನ ಕುರ್ಡಿ ಕೆರೆ ತುಂಬಿಸುವ ಯೋಜನೆ, ಕೆ.ಆರ್.ನಗರ ತಾಲ್ಲೂಕಿನ ಕೆಸ್ತೂರು ಕೊಪ್ಪಲು ಏತ ನೀರಾವರಿ, ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದ ಬಳಿ ಏತ ನೀರಾವರಿ, ಚಿತ್ತಾಪುರ ತಾಲ್ಲೂಕಿನ ಕೆರೆ ತುಂಬಿಸುವ ಯೋಜನೆ, ವರದಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಗೆ ೮೫೦ ಕೋಟಿ ರೂ. ನಿಗದಿ.