ಸಮುದ್ರದ ಆಳದಲ್ಲೂ ಸಿಗದ ಮೀನು

Advertisement

ರಾಮಕೃಷ್ಣ ಆರ್
ಮಂಗಳೂರು: ನಲಿವಿಗಿಂತ ನೋವಿನಲ್ಲಿಯೇ ಈ ವರ್ಷದ ಮತ್ಸ್ಯ ಋತು ಸಮಾಪನಗೊಳ್ಳುತ್ತಿದೆ. ಜೂನ್ ೧ರಿಂದ ೩೧ರ ತನಕ ೬೧ ದಿನ ಮೀನುಗಾರಿಕೆಗೆ ಮಳೆಗಾಲದ ರಜೆ.
ಸಮುದ್ರದ ಆಳ ಮೊಗೆದರೂ ಬುಟ್ಟಿ ತುಂಬ ಮೀನು ಸಿಗಲಿಲ್ಲ. ಕನಿಷ್ಟ ಮೀನುಗಾರಿಕೆಗೆ ಹೋದ ಬೋಟ್‌ನ ಡೀಸೆಲ್ ವೆಚ್ಚ ಕೂಡಾ ಹುಟ್ಟಿಲ್ಲ. ಮೀನುಗಾರಿಕೆ ಸವಾಲನ್ನು ಎದುರಿಸುತ್ತಿದೆ. ಹವಾಮಾನ ವೈಪ್ಯರೀತ್ಯ, ಮಳೆ ಕೊರತೆ, ವಿಪರೀತ ಸೆಖೆಯ `ಎಲ್‌ನಿನೋ’ ಕಾರಣದಿಂದ ಮೀನುಗಳ ವಲಸೆ. ಸಮುದ್ರ ಮಾಲಿನ್ಯ, ಅವೈಜ್ಞಾನಿಕ ಮೀನುಗಾರಿಕೆ, ಸಕಾಲಕ್ಕೆ ದೊರೆಯದ ಡೀಸೆಲ್ ಸಬ್ಸಿಡಿಯಿಂದ ಕರಾವಳಿ ಭಾಗದ ಆರ್ಥಿಕ ಚಟುವಟಿಕೆಯ
ಜೀವನಾಡಿ ಮೀನುಗಾರಿಕೆ ಸಂಕಷ್ಟದಲ್ಲಿದೆ.
ಮತ್ಸ್ಯಕ್ಷಾಮದ ಕಾರಣದಿಂದಾಗಿ ಮೀನುಗಾರಿಕೆ ಅವಲಂಬಿತ ಇತರ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಪರಿಣಾಮ ಮಾರುಕಟ್ಟೆಯಲ್ಲಿ ಮೀನಿನ ದರ ದುಬಾರಿ ಒಂದೆಡೆಯಾದರೆ ಇನ್ನೊಂದೆಡೆ ಕರಾವಳಿಯ ಮೀನು ಮಾರುಕಟ್ಟೆಯಲ್ಲಿ ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಮೀನುಗಳು ದೊರೆಯಲಾರಂಭಿಸಿದವು.
ಈ ಹಿಂದೆ ಮೀನುಗಾರಿಕೆಗೆ ೯೦ ದಿನಗಳ ರಜೆ ಕಡ್ಡಾಯವಾಗಿತ್ತು. ಈ ಅವಧಿ ಮೀನುಗಳ ಸಂತಾನೋತ್ಪತ್ತಿ ಅವಧಿ. ಈ ವೇಳೆ ಯಾಂತ್ರಿಕ ದೋಣಿಗಳು ನೀರಿಗಿಳಿದರೆ ಮೀನುಗಳ ಸಂತಾನೋತ್ಪತಿಗೆ ತಡೆಯಾಗುತ್ತದೆ. ಜತೆಗೆ ವಿಪರೀತ ಗಾಳಿ, ಮಳೆಯಾಗುವುದರಿಂದ ಕಡಲು ಪ್ರಕ್ಷುಬ್ಧಗೊಂಡು ಮೀನುಗಾರಿಕೆ ನಡೆಸುವುದು ಕೂಡಾ ಅಪಾಯಕಾರಿ. ಆದ್ದರಿಂದ ಯಾಂತ್ರೀಕೃತ ಮೀನುಗಾರಿಕೆಗೆ ಕಡ್ಡಾಯ ನಿಷೇಧ. ಆದರೆ ಈಗ ಮೀನುಗಾರಿಕೆ ರಜೆ ಅವಧಿ ಬರೇ ಎರಡು ತಿಂಗಳಿಗೆ ಸೀಮಿತವಾಗಿದೆ. ಈ ಹಿಂದೆ ಮೀನುಗಾರಿಕೆ ವೃತ್ತಿ ಮೊಗವೀರ ಸಮಾಜಕ್ಕೆ ಸೀಮಿತವಾಗಿತ್ತು. ಆದರೆ ಈಗ ಎಲ್ಲರೂ ಮೀನುಗಾರಿಕೆ ನಡೆಸುವುದರಿಂದ ವರ್ಷದಿಂದ ವರ್ಷಕ್ಕೆ ಕಡಲಿಗಿಳಿಯುವ ಬೋಟ್‌ಗಳ ಸಂಖ್ಯೆಯೂ ಹೆಚ್ಚಾಗಿದೆ.