ಸಮೃದ್ಧ ಸಮಾಜ ರೂಪಿಸುವಲ್ಲಿ ಲೋಕಶಿಕ್ಷಣ ಟ್ರಸ್ಟ್ ಮಾದರಿ

Advertisement

ಹುಬ್ಬಳ್ಳಿ: ಲೋಕ ಶಿಕ್ಷಣ ಟ್ರಸ್ಟ್ ನಾಡಿನ ಹೆಮ್ಮೆಯ ಪ್ರಕಾಶನ ಸಂಸ್ಥೆಯಾಗಿದ್ದು ತನ್ನದೇ ಮೌಲ್ಯಗಳೊಂದಿಗೆ ಸಮೃದ್ದ ಸಮಾಜ, ರಾಷ್ಟ್ರ ನಿರ್ಮಾಣದಲ್ಲಿ ಬದ್ಧತೆ ಮೆರೆದಿರುವುದು ಮಾದರಿಯಾಗಿದೆ. ಸಂಸ್ಥೆಯ ಸಂಯುಕ್ತ ಕರ್ನಾಟಕ ಪತ್ರಿಕೆಯು ಸಹ್ಯ ಮತ್ತು ಮಾನವೀಯ ಸಮಾಜಕ್ಕಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ತುಡಿಯುತ್ತಿದೆ. ಈ ತತ್ವದೊಂದಿಗೆ ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ, ಮಾಜಿ ಶಾಸಕ ಡಿ.ಆರ್. ಪಾಟೀಲ ಗುರುವಾರ ನುಡಿದರು.
ಧರ್ಮದರ್ಶಿಯಾದ ನಂತರ ಮೊದಲ ಬಾರಿಗೆ ಹುಬ್ಬಳ್ಳಿ ಸಂಯುಕ್ತ ಕರ್ನಾಟಕ ಕಾರ್ಯಾಲಯಕ್ಕೆ ಭೇಡಿ ನೀಡಿದ ಅವರು, ಸಮಾಜಮುಖಿ ನಿಲುವಿನಿಂದ ಎಲ್ಲರ ಬದುಕು ಹಸನಾಗಬೇಕು ಎಂಬುದೇ ಪತ್ರಿಕೆಯ ಮೊದಲ ಧ್ಯೇಯ' ಎಂದರು. ಪತ್ರಿಕಾ ಮಾಧ್ಯಮದ ಪ್ರಭಾವ ಅಪಾರವಾಗಿರುತ್ತದೆ. ವೈಯಕ್ತಿಕ-ಕೌಟುಂಬಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎನ್ನುವುದು ಮಾಧ್ಯಮದ ಮಂತ್ರ. ಈ ಸದ್ಭಾವನೆಯೊಂದಿಗೆ ಸಾಗುತ್ತಿರುವ ಸಂಯುಕ್ತ ಕರ್ನಾಟಕ ದೇಶದ ಸಮಗ್ರತೆ-ಏಕತೆಗಳಿಗೆ ತುಡಿಯುತ್ತದೆ’ ಎಂದರು.
ಗ್ರಾಮ ಸ್ವರಾಜ್ ಸೇರಿದಂತೆ ಮಹಾತ್ಮಾ ಗಾಂಧಿಯವರು ಪ್ರತಿಪಾದಿಸಿದ ಭಾರತೀಯ ಸಮಾಜದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ ಎಂದು ಒತ್ತಿ ಹೇಳಿದರು.
ಸಾಮಾಜಿಕವಾದ ಅನೇಕ ಬದಲಾವಣೆಗಳನ್ನು ಕಾಣುತ್ತಿರುವ ಕಾಲಘಟ್ಟವಿದಾಗಿದೆ. ಎಲ್ಲ ಕಡೆ ಮೌಲ್ಯಗಳ ಕುಸಿತವನ್ನು ಕಾಣುವಂತಾಗಿದೆ. ಇದನ್ನು ತಪ್ಪಿಸಿ, ಮತ್ತೆ ಸಮಾಜದ ಮೌಲ್ಯಗಳನ್ನು ಪುನಃ ಪ್ರತಿಷ್ಠಾಪಿಸುವುದಕ್ಕಾಗಿ ಪತ್ರಿಕೆ ತನ್ನ ಬರಹಗಳ ಮೂಲಕ ಶ್ರಮಿಸುತ್ತಿದೆ ಎಂದು ಡಿ.ಆರ್. ಪಾಟೀಲ ನುಡಿದರು.
ಲೋಕ ಶಿಕ್ಷಣ ಟ್ರಸ್ಟಿನ ಧರ್ಮದರ್ಶಿಗಳಲ್ಲಿ ಒಬ್ಬರಾಗಿರುವುದು ಅಪಾರ ಸಂತೋಷ ತಂದಿದೆ. ನನ್ನ ಮೇಲೆ ಪತ್ರಿಕಾ ಬಳಗ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ತಾರದಂತೆ ಸಂಸ್ಥೆಯ ಸಮಗ್ರ ಬೆಳವಣಿಗೆಗೆ ಎಲ್ಲರೊಡನೆ ಸೇರಿ ಶ್ರಮಿಸುವುದಾಗಿ ಡಿ.ಆರ್. ಪಾಟೀಲ ನುಡಿದರು.
ಇದಕ್ಕೂ ಮುನ್ನ ನೂತನ ಧರ್ಮದರ್ಶಿಯವರನ್ನು ಇನ್ನೋರ್ವ ಟ್ರಸ್ಟಿ ಕೇಶವ ದೇಸಾಯಿ ಸ್ವಾಗತಿಸಿ ಗ್ರಂಥಗಳನ್ನು ಸಮರ್ಪಿಸಿದರು. ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ ಪರಿಚಯಿಸಿದರು.
ಸರಳ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ವಸಂತ ಲದವಾ, ಮಹೇಂದ್ರ ಸಿಂಘಿ, ಪಾಲಿಕೆ ಮಾಜಿ ಸದಸ್ಯ ಪ್ರತಾಪ ಚವ್ಹಾಣ, ಎಪಿಎಂಸಿ ಮಾಜಿ ಸದಸ್ಯ ರಘುನಾಥಗೌಡ ಕೆಂಪಲಿಂಗನಗೌಡರ, ಪತ್ರಿಕೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಗಣ್ಯರು ಉಪಸ್ಥಿತರಿದ್ದರು.