ಸರ್ಕಾರದ ತಿಜೋರಿಗೆ ಜಾತಿಗಣತಿ ವರದಿ

Advertisement

ಬೆಂಗಳೂರು: ಬಹು ನಿರೀಕ್ಷಿತ ಕರ್ನಾಟಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಎಂಬ ಶೀರ್ಷಿಕೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಜಾತಿ ಗಣತಿಯ ವರದಿಯನ್ನು ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.
೨೦೧೪ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಚ್.ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ, ಜಾತಿ ಗಣತಿ ನಡೆಸಲು ಆದೇಶಿಸಿದ್ದರು. ೨೦೧೫ರಲ್ಲಿ ಸಮೀಕ್ಷೆ ನಡೆದಿತ್ತು. ಆದರೆ ರಾಜ್ಯದ ಬಹುಸಂಖ್ಯಾತ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸಮುದಾಯಗಳ ಮಠಾಧೀಶರು, ರಾಜಕೀಯ ಮತ್ತು ಸಾಮಾಜಿಕ ಮುಖಂಡರು ಸೇರಿದಂತೆ ಅನೇಕರು ಜಾತಿ ಗಣತಿ ಅವೈಜ್ಞಾನಿಕ ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಆರೋಪಿಸಿ, ವೈಜ್ಞಾನಿಕವಾದ ಮರು ಸಮೀಕ್ಷೆ ನಡೆಸುವಂತೆ ಆಗ್ರಹಿಸಿದ್ದರು. ಆದರೆ ಆಯೋಗದ ವರದಿ ೨೦೨೩ರ ನವೆಂಬರ್ ಅಂತ್ಯಕ್ಕೆ ಪೂರ್ಣಗೊಂಡರೂ ಸಿಎಂ ಸಿದ್ದರಾಮಯ್ಯ ಎರಡು ಬಾರಿ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು ಮುಂದುವರಿಸಿದ್ದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾತಿಗಣತಿಯನ್ನು ಅಂತಿಮವಾಗಿ ಸ್ವೀಕರಿಸಿದ್ದು, ಈವರೆಗೆ ಅಂದಾಜು ೧೫೪ ಕೋಟಿ ರೂ.ಗಳನ್ನು ರಾಜ್ಯ ಸರಕಾರ ಇದಕ್ಕಾಗಿ ವೆಚ್ಚ ಮಾಡಿದೆ.
ಆಯೋಗದ ಸಿಬ್ಬಂದಿ ಜಾತಿ ಗಣತಿಯ ಸಂಪೂರ್ಣ ಪ್ರತಿಗಳನ್ನು ಸೀಲು ಮಾಡಿದ ಎರಡು ಬಾಕ್ಸ್ಗಳನ್ನು ಸಿಎಂ ಕಚೇರಿಗೆ ಹೊತ್ತು ತಂದಿದ್ದರು. ವರದಿಯ ಒಂದು ಭಾಗದ ಪ್ರತಿಯನ್ನು ಮಾತ್ರ ಸಿಎಂ ಸಿದ್ದರಾಮಯ್ಯ ಅವರಿಗೆ ಆಯೋಗದ ಅಧ್ಯಕ್ಷ ಹೆಗ್ಡೆ ಸಾಂಕೇತಿಕವಾಗಿ ಸಿಎಂಗೆ ನೀಡಿದರು. ನಂತರ ವರದಿಯ ಪ್ರತಿಗಳನ್ನು ಸರಕಾರದ ಸುಪರ್ದಿಗೆ ವಹಿಸಲಾಯಿತು.
ವರದಿ ಸಲ್ಲಿಕೆಯ ನಂತರ ಮಾತನಾಡಿದ ಆಯೋಗ ಅಧ್ಯಕ್ಷ ಹೆಗ್ಡೆ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಸರಕಾರ ಮುಂದಿನ ಕ್ರಮಕೈಗೊಳ್ಳಲಿದೆ. ನಾವು ನಮ್ಮ ಜವಾಬ್ದಾರಿ ನಿಭಾಯಿಸಿದ್ದೇವೆ. ವೈಜ್ಙಾನಿಕವಾಗಿ ವರದಿ ಸಲ್ಲಿಸಿದ್ದೇವೆ. ವರದಿಯಲ್ಲೇನಿದೆ ಎಂಬುದನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಹೇಳಿದರು.
೨೦೧೪-೧೫ರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶಿಕ್ಷಕರು, ಸಿಬ್ಬಂದಿ, ಅಧಿಕಾರಿಗಳು ದತ್ತಾಂಶ ವರದಿ ಸಿದ್ಧಪಡಿಸಿದ್ದಾರೆ. ಈ ಹಿಂದೆ ಕಾಂತರಾಜ್ ಅವರು ವರದಿ ಸಲ್ಲಿಕೆ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಲಿಲ್ಲ. ವರದಿ ಸೋರಿಕೆ ಆಗಿಲ್ಲ. ವರದಿಯ ಕೆಲವು ಅಂಶಗಳು ಹೊರಗೆ ಹೋಗಿರಬಹುದು. ರಾಜ್ಯಾದ್ಯಂತ ೧.೩೩ ಲಕ್ಷ ಶಿಕ್ಷಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿ ಒಟ್ಟು ೧.೬೦ ಲಕ್ಷ ಸಿಬ್ಬಂದಿ ದತ್ತಾಂಶ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದರು. ಅದನ್ನು ಆಧರಿಸಿಯೇ ಅಂತಿಮ ವರದಿ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.