ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರ್ಜರಿಯೊಂದೇ ದಾರಿ

Advertisement

ನಾಂದೇಡ್ ಆಗಲಿ ಚಾಮರಾಜ ನಗರವಾಗಲಿ ಸರ್ಕಾರಿ ಆಸ್ಪತ್ರೆಗಳ ದುರವಸ್ಥೆ ಹೇಳತೀರದು. ಇದಕ್ಕೆ ಯಾರೋ ಒಬ್ಬರು ಕಾರಣ ಅಲ್ಲ. ವೈದ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು ಹೊಣೆ ಹೊರಬೇಕು.

ಮಹಾರಾಷ್ಟ್ರವಾಗಲೀ ಕರ್ನಾಟಕವಾಗಲೀ ಎಲ್ಲ ಕಡೆ ಸರ್ಕಾರಿ ಆಸ್ಪತ್ರೆ ಎಂದು ಕೂಡಲೇ ಅವುಗಳ ಕಾರ್ಯವೈಖರಿ ಬಗ್ಗೆ ಹೇಳುವ ಅಗತ್ಯವಿಲ್ಲ. ತುಂಬಿ ತುಳುಕಾಡುವ ರೋಗಿಗಳು, ವೈದ್ಯರ ಕೊರತೆ, ಔಷಧಗಳ ಅಭಾವ. ಹಣವಿಲ್ಲದೆ ಏನೂ ನಡೆಯುವುದಿಲ್ಲ. ಇದು ಆಸೇತು ಹಿಮಾಚಲದಿಂದ ರಾಮೇಶ್ವರದವರೆಗೆ ಇರುವ ಪರಿಸ್ಥಿತಿ. ಕೆಲವು ಕಡೆ ಸರ್ಕಾರಿ ಆಸ್ಪತ್ರೆಗಳು ಉತ್ತಮವಾಗಿ ನಡೆಯುವುದುಂಟು. ಅದು ಅಪರೂಪ ಹಾಗೂ ಅಪವಾದ. ಮಹಾರಾಷ್ಟ್ರದ ನಾಂದೇಡ್ ಮತ್ತು ಕರ್ನಾಟಕದ ಚಾಮರಾಜನಗರ ಗಡಿ ಭಾಗದಲ್ಲಿರುವ ಜಿಲ್ಲೆಗಳು. ಇಲ್ಲಿ ಸವಲತ್ತು ಎಲ್ಲ ರೀತಿಯಿಂದಲೂ ಕನಿಷ್ಠಕ್ಕೆ ಇಳಿದಿರುತ್ತದೆ. ಸರ್ಕಾರ ಹೊಸ ಕಟ್ಟಡಗಳನ್ನು ಕಟ್ಟುತ್ತದೆಯೇ ಹೊರತು ಅದರ ನಿರ್ವಹಣೆಯ ಬಗ್ಗೆ ಚಿಂತಿಸುವುದಿಲ್ಲ. ನಾಂದೇಡ್‌ನಲ್ಲಿ ಸರ್ಕಾರಿ ಆಸ್ಪತ್ರೆ ಹೊಸದೇನಲ್ಲ. ಇಲ್ಲೂ ವೈದ್ಯಕೀಯ ಸಿಬ್ಬಂದಿ, ಔಷಧ ಕೊರತೆ. ಅದನ್ನು ಪೂರೈಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಅದರಲ್ಲೂ ಶೌಚಾಲಯಗಳು ಅಸಹನೀಯ. ಇಂಥ ಆಸ್ಪತ್ರೆಗೆ ರೋಗಿಗಳು ಇರಲಿ, ಆರೋಗ್ಯವಂತರೇ ಹೋದರೂ ರೋಗದಿಂದ ಬಳಲುವುದು ಖಂಡಿತ. ಹೀಗಿರುವಾಗ ನವಜಾತ ಶಿಶುಗಳು ಎಲ್ಲಿ ಬದುಕಲು ಸಾಧ್ಯ? ಆಸ್ಪತ್ರೆ ನಿರ್ವಹಣೆಗೆ ಸರ್ಕಾರದಲ್ಲಿ ಹಣವಿಲ್ಲ ಎಂಬುದು ಕೇವಲ ಕಾಟಾಚಾರದ ಉತ್ತರ. ಭ್ರಷ್ಟಾಚಾರವೇ ಎಲ್ಲಕ್ಕೂ ಮೂಲ. ಸಂಸದರು ಆಸ್ಪತ್ರೆಗೆ ಬಂದು ಡೀನ್ ಕೈನಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ್ದು ಸರಿಯಲ್ಲ ಎಂದು ಎಲ್ಲ ವೈದ್ಯರು ಪ್ರತಿಭಟನೆ ನಡೆಸುವುದಕ್ಕೆ ಮುಂದಾಗಿದ್ದಾರೆ.
ಇದು ಒಂದು ಆಸ್ಪತ್ರೆಯ ಕತೆಯಲ್ಲ. ಕರ್ನಾಟಕದ ಗಡಿ ಭಾಗದಲ್ಲಿರುವ ಚಾಮರಾಜನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಬಳಲುತ್ತಿದ್ದ ೨೪ ಜನ ೨೦೨೧ ರಲ್ಲಿ ಆಮ್ಲಜನಕ ಲಭಿಸದೆ ಮೃತಪಟ್ಟರು. ಇದುವರೆಗೆ ಇದರ ಬಗ್ಗೆ ಯಾರಿಗೂ ಶಿಕ್ಷೆಯಾಗಿಲ್ಲ. ಸರ್ಕಾರ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ನಾಂದೇಡ್ ಆಸ್ಪತ್ರೆಯ ಕತೆಯೂ ಇದೆ. ಅಲ್ಲಿ ವೈದ್ಯಕೀಯ ಕಾಲೇಜಿಗೆ ಸೇರಿದ ಆಸ್ಪತ್ರೆಯಲ್ಲೇ ಸಾವಿನ ತಾಂಡವ ನೃತ್ಯ ನಡೆದಿದೆ. ಇದೆಲ್ಲವೂ ನಮ್ಮ ಸರ್ಕಾರಿ ಆಸ್ಪತ್ರೆಗಳ ದುಃಸ್ಥಿತಿಯನ್ನು ತೋರಿಸುತ್ತದೆ. ಇದಕ್ಕೆ ಪರಿಹಾರ ಎಂದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಇಂಥ ದುರಂತಗಳು ನಡೆದಾಗ ಜನಪ್ರತಿನಿಧಿಗಳು ಕೈಗೆ ಸಿಕ್ಕ್ಕ ವೈದ್ಯರು ಮತ್ತು ಇತರ ಸಿಬ್ಬಂದಿಯ ಮೇಲೆ ಗೂಬೆ ಕೂರಿಸಿ ತಾವು ಜನರ ಆಕ್ರೋಶದಿಂದ ಪಾರಾಗಲು ಯತ್ನಿಸುತ್ತಾರೆ. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ತೆರೆಯುವ ಭರದಲ್ಲಿ ಗುಣಮಟ್ಟದ ಕಡೆ ಗಮನಹರಿಸಿಲ್ಲ. ವೈದ್ಯಕೀಯ ಶಿಕ್ಷಣಮಟ್ಟ ಇಳಿಮುಖಗೊಳ್ಳುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಅನಾರೋಗ್ಯಕರ ಪೈಪೋಟಿ ಬೆಳೆದಿದೆ. ಇದೊಂದು ವಿಷಚಕ್ರ. ಸರ್ಕಾರಿ ವೈದ್ಯರೇ ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿರುತ್ತಾರೆ. ನಾಂದೇಡ್‌ನಲ್ಲಿ ಖಾಸಗಿ ಆಸ್ಪತ್ರೆಗಳ ಹಾವಳಿ ಅಧಿಕ. ಖಾಸಗಿಯವರು ರೋಗಿಗಳ ಪರಿಸ್ಥಿತಿ ಬಿಗಡಾಯಿಸಿದಾಗ ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸುವುದು ಸಾಮಾನ್ಯ. ಸರ್ಕಾರಿ ಆಸ್ಪತ್ರೆ ಯಾವುದೇ ರೋಗಿಗೆ ಪ್ರವೇಶ ಇಲ್ಲ ಎನ್ನುವಂತಿಲ್ಲ. ಹೀಗಾಗಿ ರೋಗಿಗಳ ಸಂಖ್ಯೆ ಅಧಿಕಗೊಂಡು ಪರಿಣಾಮಕಾರಿ ಚಿಕಿತ್ಸೆ ಸಿಗುವುದಿಲ್ಲ. ಎರಡು ವರ್ಷಗಳ ಹಿಂದೆ ಚಾಮರಾಜನಗರದ ಆಸ್ಪತ್ರೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಪ್ರತಿಷ್ಠೆಯಿಂದ ಅನಾಹುತ ಸಂಭವಿಸಿತು. ಮೈಸೂರಿನಿಂದ ಚಾಮರಾಜನಗರಕ್ಕೆ ಆಮ್ಲಜನಕದ ಸಿಲಿಂಡರ್‌ಗಳು ಸಕಾಲಕ್ಕೆ ಹೋಗಲಿಲ್ಲ. ೨೪ ಜನ ಕೊನೆಯುಸಿರು ಎಳೆದರು. ಇಂಥ ಕರುಣಾಜನಕ ಘಟನೆಗಳು ಇನ್ನೂ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ. ಇದಕ್ಕೆಲ್ಲ ಒಂದೇ ಉತ್ತರ ಎಂದರೆ ಸಂಬಂಧಪಟ್ಟ ವೈದ್ಯರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. `ಡೆತ್ ಆಡಿಟ್’ ಮಾಡಲು ಅವಕಾಶ ಇದೆ. ಅದನ್ನು ಮಾಡಿಸಿದರೆ ಸಾವಿನ ನಿಜವಾದ ಕಾರಣ ಮತ್ತು ಸಮಯ ಎರಡೂ ತಿಳಿಯುತ್ತದೆ. ಅದರ ಆಧಾರದ ಮೇಲೆ ನ್ಯಾಯಾಲಯ ಶಿಕ್ಷೆ ವಿಧಿಸಬಹುದು. ಈ ಅಧಿಕಾರ ಸರ್ಕಾರಕ್ಕಿದೆ. ಖಾಸಗಿ ಆಸ್ಪತ್ರೆಗೂ ಅನ್ವಯಿಸಬಹುದು.