ಸವದತ್ತಿ ಯಲ್ಲಮ್ಮ ದೇವಿ ಮಂದಿರದ ಅಭಿವೃದ್ಧಿಗೆ ಕ್ರಮ

Advertisement

ಬೆಳಗಾವಿ(ಉಗರಗೋಳ): ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ತಿರುಪತಿ ಮತ್ತು ಶ್ರೀಶೈಲ ಮಾದರಿಯಲ್ಲಿ ಸುಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿ ಮಂದಿರವನ್ನೂ ಅಭಿವೃದ್ಧಿ ಪಡಿಸಲು ಎಲ್ಲ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸಮೀಪದ ಯಲ್ಲಮ್ಮ ಗುಡ್ಡಕ್ಕೆ ಶನಿವಾರ ಕುಟುಂಬ ಸಮೇತ ಭೇಟಿ ನೀಡಿ ದೇವಿ ದರ್ಶನ ಆಶಿರ್ವಾದ ಪಡೆದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಇದು ದೊಡ್ಡ ಪ್ರವಾಸೋಧ್ಯಮ ಮತ್ತು ಧಾರ್ಮಿಕ ಕೇಂದ್ರ. ದೇವಿ ದರ್ಶನ ಮತ್ತು ಜಾತ್ರೆಗೆ ಕೋಟ್ಯಾಂತರ ಭಕ್ತರು ಬರುತ್ತಾರೆ ಹಾಗಾಗಿ, ಈ ಕ್ಷೇತ್ರದ ಅಭಿವೃದ್ಧಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಗಲ ಅಂಗಡಿಯವರು ಸಂಸದರಾಗಿದ್ದಾಗ ೧೧ ಕೋಟಿ ಹಣ ಮಂಜೂರು ಆಗಿತ್ತು. ಆ ಅನುದಾನದಡಿ ಒಂದಿಷ್ಟು ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಇನ್ನು ಅಗತ್ಯವಿರುವ ಕಾಮಗಾರಿಗಳ ಪಟ್ಟಿ ಕೊಡುವಂತೆ ದೇವಸ್ಥಾನ ಆಡಳಿತ ಮಂಡಳಿಗೆ ತಿಳಿಸಿದ್ದೇನೆ ಎಂದರು.
ಅದೇ ರೀತಿ ಇನ್ನು ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ನನ್ನದೇ ಯೋಜನೆಗಳಿವೆ. ಭಕ್ತಾದಿಗಳು ಉಳಿದುಕೊಳ್ಳಲು ವಸತಿ ವ್ಯವಸ್ಥೆ, ಕುಡಿಯುವ ನೀರು, ಮೂಲಭೂತ ಸೌಕರ್ಯ ಸೇರಿ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೇ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿರುವ ಎಲ್ಲ ಧಾರ್ಮಿಕ ಮತ್ತು ಪ್ರವಾಸೋಧ್ಯಮ ಸ್ಥಳಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಜಗದೀಶ ಶೆಟ್ಟರ್ ಹೇಳಿದರು.
ಯಲ್ಲಮ್ಮಗುಡ್ಡಕ್ಕೆ ರೈಲ್ವೇ ಸಂಪರ್ಕ ವಿಚಾರಕ್ಕೆ ಈಗಾಗಲೇ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಜಗದೀಶ ಶೆಟ್ಟರ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.