ಸವದತ್ತಿ ರೇಣುಕಾ ಯಲ್ಲಮ್ಮ, ಬದಾಮಿ ಬನಶಂಕರಿ ಜಾತ್ರೆಗೆ ವಿಶೇಷ ಬಸ್

Advertisement

ಹುಬ್ಬಳ್ಳಿ : ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ಹಾಗೂ ಬದಾಮಿ ಶ್ರೀ ಬನಶಂಕರಿದೇವಿ ಜಾತ್ರೆಗೆ ಹೋಗಿ ಬರುವ ಭಕ್ತಾದಿಗಳ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಜನೆವರಿ ೨೩ ರಿಂದ ೩೦ ರ ವರೆಗೆ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಜಾತ್ರಾ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಸವದತ್ತ್ತಿ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆ ಹಾಗೂ ಬಾದಾಮಿ ಶ್ರೀ ಬನಶಂಕರಿ ದೇವಿ ಜಾತ್ರೆಗಳು ಜನವರಿ ೨೩ ರಿಂದ ೩೦ ರವರೆಗೆ ಜರುಗಲಿವೆ. ಈ ಜಾತ್ರೆಗಳಿಗೆ ಹೋಗಿ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡ ಮತ್ತು ಬನಶಂಕರಿಗೆ ಹಾಗೂ ನವಲಗುಂದದಿಂದ ಯಲ್ಲಮ್ಮನಗುಡ್ಡಕ್ಕೆ ಹೆಚ್ಚುವರಿ ಜಾತ್ರಾ ವಿಶೇಷ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.
ಇದಕ್ಕಾಗಿ ಹುಬ್ಬಳ್ಳಿಯಿಂದ ೨೫ ಹಾಗೂ ನವಲಗುಂದದಿಂದ ೧೦ ಬಸ್ಸುಗಳು, ೧೦೦ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು, ಮೇಲ್ವಿಚಾರಣೆಗಾಗಿ ೧೦ ಅಧಿಕಾರಿಗಳು ಹಾಗೂ ೨೦ ಮೇಲ್ವಿಚಾರಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪ್ರಯಾಣಿಕರ ಒತ್ತಡಕ್ಕೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಜಾತ್ರೆ ವಿಶೇಷ ಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.
ಹುಬ್ಬಳ್ಳಿ – ಯಲ್ಲಮ್ಮನ ಗುಡ್ಡ: ಈ ಬಸ್ಸುಗಳು ಧಾರವಾಡ,ಸೌದತ್ತಿ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಸಂಚರಿಸುತ್ತವೆ.
ಹುಬ್ಬಳ್ಳಿ-ಬನಶಂಕರಿ: ಈ ಬಸ್ಸುಗಳು ನವಲಗುಂದ, ನರಗುಂದ, ಕೊಣ್ಣೂರು, ಕುಳಗೇರಿ, ಬಾದಾಮಿ ಮಾರ್ಗವಾಗಿ ಸಂಚರಿಸುತ್ತವೆ.
ನವಲಗುಂದ- ಯಲ್ಲಮ್ಮನ ಗುಡ್ಡ: ಈ ಬಸ್ಸುಗಳು ನವಲಗುಂದ ಬಸ್ ನಿಲ್ದಾಣದಿಂದ ಹೊರಡುತ್ತವೆ. ಗೊಬ್ಬರ ಗುಂಪಿ ಕ್ರಾಸ್, ಅಳಗವಾಡಿ ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ.