ಸಹನಶೀಲತೆ ಉತ್ತಮ ಬದುಕಿಗೆ ಬೆಳಕು

Advertisement

ಉದ್ವೇಗ, ಸಿಟ್ಟು, ಧಾವಂತ… ಓಟ ಓಟ ಬರೀ ಓಟ…. ಇಂದಿನ ಜೀವನದಲ್ಲಿನ ಅತ್ಯಂತ್ಯ ಸಹಜವೆನ್ನುವಷ್ಟರ ಮಟ್ಟಿಗೆ ನಮ್ಮ ಬದುಕಿನಲ್ಲಿ ವಿಲೀನಗೊಂಡಿವೆ. ಕೊಂಚ ನಿಧಾನ ಮಾಡಿದರೆ ಸಾಕು… ಮತ್ತೆಲ್ಲೋ ಹಿಂದೆ ಬಿದ್ದೇವೋ … ಸಿಗಬೇಕಾದದ್ದು ಸಿಗಲಿಲ್ಲವೋ… ಎಷ್ಟೊ ಹಣ ಕಳೆದುಕೊಂಡೆವೋ… ಇತ್ಯಾದಿ ನಮ್ಮ ಹರಕತ್ತುಗಳಿಗಾಗಿಯೇ ನಮ್ಮ ಆರೋಗ್ಯಕರವಾದ ಮನಸ್ಸನ್ನು ಬಲಿ ಕೊಡುತ್ತಲೇ ಬಂದಿದ್ದೇವೆ.
ಇದರೊಟ್ಟಿಗೆ ಸಂಕಷ್ಟಗಳನ್ನು, ತೊಂದರೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೇವೆ. ಅಷ್ಟೇ ಅಲ್ಲ; ಕಾಯ ಬಸವಳಿದು ಕಾಯಿಲೆ ಬೀಳುತ್ತೇವೆ. ದೇಹ ಬಳಲುವಂತೆ ಮಾಡಿಕೊಳ್ಳುತ್ತಿದ್ದೇವೆ.
ಕಷ್ಟ ನಷ್ಟಗಳನ್ನೆಲ್ಲ ಎದುರಿಸಿ ಬಂದದ್ದು ಬರಲಿ ಭಗವಂತನ ದಯವಿರಲಿ… ಎಂದು ಮುನ್ನುಗ್ಗುವ ಪ್ರಯತ್ನ ಮಾಡಬೇಕಲ್ಲದೇ ಅದರಲ್ಲಿ ವ್ಯವಧಾನ ಇರಿಸಿಕೊಳ್ಳಬೇಕು. ಮನಸ್ಸನ್ನು ಸೈರಣೆಯಲ್ಲಿಟ್ಟುಕೊಳ್ಳಬೇಕು.
`ಇನ್ನಲ್ಲಾಹು ಮಾ ಸಾಬಿರೀನ್’
ಅಂದರೆ ಸಹನಶೀಲರ ಜೊತೆಗೆ ನಾನಿದ್ದೇನೆ ಎಂದು ಸ್ವತಃ ಅಲ್ಲಾಹ್‌ನೇ ಹೇಳಿದಾನೆ. ನಾವು ಆದಷ್ಟು ಪ್ರಯತ್ನ ಮಾಡಿ ಸಹನಶೀಲತೆಯಿಂದ ಇರಬೇಕು. ಕಷ್ಟ ಬಂದರೂ ಕೂಡ ಸಹನದಿಂದ ಇದ್ದರೆ ದೇವರೇ ಅದನ್ನು ದೂರ ಮಾಡುತ್ತಾನೆ. ದೇವರ ಮೇಲೆ ನಂಬಿಕೆ ಇಟ್ಟು ಸೈರಣೆಯಿಂದ ಬದುಕುವದು ನೆಮ್ಮದಿ ಬದುಕಿನ ಸುಗಮ ಪಥವಾಗಿದೆ. ಭಗವಂತನಿಗೆ ನಮ್ಮ ಸಾಮರ್ಥ್ಯ ಗೊತ್ತು. ನಮ್ಮ ಯೋಗ್ಯತೆಗೆ ತಕ್ಕಂತೆಯೇ ಕಮಾನುಸಾರ ಕಷ್ಟಗಳನ್ನು ಕೊಡುತ್ತಾನೆ. ಅದನ್ನು ಮೀರಿ ಕೊಡುವದಿಲ್ಲ. ಹಿತವಿರಲಿ, ಅಹಿತವಿರಲಿ ಅದೆಲ್ಲವೂ ಭಗವಂತನ ಇಚ್ಛೆ, ನಮ್ಮ ನಮ್ಮ ಕರ್ಮ ಫಲವೂ ಆಗಿದೆ. ಆದುದರಿಂದ ಇಂದ ಕಷ್ಟಗಳೆಲ್ಲ ಭಗವಂತನ ಇಚ್ಛೆ ಎಂದು ಬಾಳಿದರೆ ಅದು ಸುಗಮ ದಾರಿಯಾಗುವದು.
ಕೆಲವೊಂದು ಸಾರಿ ಕಷ್ಟಗಳನ್ನು ನಾವೇ ಬರಮಾಡಿಕೊಳ್ಳುತ್ತೇವೆ. ನಿಲುಕದ ಕೆಲಸಕ್ಕೆ ಕೈ ಹಾಕಿ ಹತಾಶರಾಗಿ ಸುಖಮಯ ಬದುಕಿಗೆ ಕಂಟಕ ತಂದುಕೊಳ್ಳುತ್ತೇವೆ. ಇಲ್ಲಿಯೂ ಕೂಡ ಬಂದ ಕಷ್ಟದ ಕಾರಣದ ಬಗ್ಗೆ ತಿಳಿಯಬೇಕು. ಕೆಲವಡೆ ಪ್ರತಿಷ್ಠೆ, ಮತ್ತು ಬಣ್ಣನೆಗಳಿಗೆ ಮರುಳಾಗಿಯೂ ಸಂಕಷ್ಟಕ್ಕೆ ಸಿಲುಕುತ್ತೇವೆ. ತೆಗಳಿಗೆ ಮತ್ತು ಹೊಗಳಿಕೆಗೆ ಮರುಳಾಗಬಾರದು. ಸಹನೆಯಿಂದಲೇ ಏನೆಲ್ಲ ಪಡೆಯಬಹುದು. ಮೋಕ್ಷವನ್ನೂ ಕೂಡ. ಆದುದರಿಂದ ಆ ಭಗವಂತ ಅಲ್ಹಾಹನ ಪ್ರೀತಿಗಾಗಿ ಸಹನೆಯಿಂದಲೇ ಇರೋಣ.