ಸಹೋದರಿಯರ ಸಾಮೂಹಿಕ ಆತ್ಮಹತ್ಯೆ

Advertisement

ತುಮಕೂರು: ತಂದೆ, ತಾಯಿ ಹಾಗೂ ಆಸರೆಯಾಗಿದ್ದ ಅಜ್ಜಿಯನ್ನೂ ಕಳೆದುಕೊಂಡ ಮೂವರು ಅನಾಥ ಸಹೋದರಿಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಒಂಬತ್ತು ದಿನಗಳ ನಂತರ ಘಟನೆ ಬೆಳಕಿಗೆ ಬಂದಿದೆ.
ಮೂವರ ಶವಗಳೂ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ರಂಜಿತಾ(24), ಬಿಂದು(21), ಚಂದನಾ(18) ಆತ್ಮಹತ್ಯೆಗೈದ ಸಹೋದರಿಯರು. ಹಲವು ವರ್ಷಗಳ ಇವರ ಹಿಂದೆಯೇ ತಂದೆ-ತಾಯಿ ಮೃತಪಟ್ಟಿದ್ದರು. ಹೀಗಾಗಿ ಮೂವರೂ ಸಹೋದರಿಯರು ಅಜ್ಜಿಯ ಆಶ್ರಯದಲ್ಲಿದ್ದರು. ಇವರಲ್ಲಿ ಇಬ್ಬರು ಕಿಬ್ಬನಹಳ್ಳಿಯ ಗಾರ್ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಅಜ್ಜಿಯೂ ಮೃತಪಟ್ಟಿದ್ದರು. ಬಳಿಕ ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಸಾಮೂಹಿಕ ಆತ್ಮಹತ್ಯೆಗೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಎಎಸ್​ಪಿ ಸಿದ್ದಾರ್ಥ್ ಗೋಯೆಲ್, ಸಿಪಿಐ ನಿರ್ಮಲಾ, ಪಿಎಸ್​ಐ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.