ಸಾಂಸ್ಕೃತಿಕ ಚಳವಳಿಯಿಂದ ಮಾತ್ರ ಶಾಂತಿ: ಸಿಎಂ ಬೊಮ್ಮಾಯಿ

Advertisement

ಮೂಡುಬಿದಿರೆ: ಹಿಂಸಾಚಾರವನ್ನು ತಡೆಗಟ್ಟಲು ದೊಡ್ಡ ಮಿಲಿಟರಿ ಇದ್ದರೂ ಸಾಧ್ಯವಿಲ್ಲ, ಭಕ್ತಿ ಚಳವಳಿ ಮಾದರಿಯಲ್ಲಿ ಸಾಂಸ್ಕೃತಿಕ ಚಳವಳಿಯನ್ನು ನಡೆಸಿದರೆ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯವಿದೆ. ಇದರಲ್ಲಿ ಸ್ಕೌಟ್ಸ್-ಗೈಡ್ಸ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೂಡುಬಿದಿರೆ ಆಳ್ವಾಸ್‌ನ ವಿದ್ಯಾಗಿರಿ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್-ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಅವರು ಭಾನುವಾರ ಭಾಗವಹಿಸಿ ಮಾತನಾಡಿ, ಪ್ರಸಕ್ತ ಧರ್ಮದ ಹೆಸರಿನಲ್ಲಿ ವಿಶ್ವದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಇದನ್ನು ತಡೆಗಟ್ಟುವ ಶಕ್ತಿ ಭಾರತದಲ್ಲಿ ಇದೆ. ಹಿಂಸೆಯ ಮನಪರಿವರ್ತನೆಗೆ ಸಾಂಸ್ಕೃತಿಕ ಚಳವಳಿ ರೂಪುಗೊಳ್ಳಬೇಕು ಎಂದರು.
ಏಕ ಭಾರತ್ ಶ್ರೇಷ್ಠ ಭಾರತ್, ಆತ್ಮನಿರ್ಭರ ಭಾರತ್, ಸಬ್ ಕೆ ಸಾತ್ ಸಬ್ ಕಾ ವಿಕಾಸ್ ಮುಂತಾದ ಘೋಷಣೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ನಿರ್ಮಾಣದ ಕಲ್ಪನೆಯನ್ನು ನೀಡಿದ್ದಾರೆ. ಈ ಸಂಕಲ್ಪವನ್ನು ಈ ಜಾಂಬೂರಿ ಇಮ್ಮಡಿಗೊಳಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಮೀರಿ ಇಲ್ಲಿರುವ ವಾತಾವರಣ ಇದೆ. ಭಾರತೀಯತೆ, ಮಾನವೀಯತೆ, ಈ ಸಂಸ್ಕೃತಿಯ ಭಾಗವಾಗಿದ್ದು, ಮುಂದಿನ ಪೀಳಿಗೆಗೆ ಇದನ್ನು ಉಳಿಸಿ ಬೆಳೆಸಲು ಸ್ಕೌಟ್ಸ್-ಗೈಡ್ಸ್ ಬಹಳ ಜವಾಬ್ದಾರಿ ಹೊಂದಿದೆ ಎಂದು ಹೇಳಿದರು.
ಭಾರತ ದೇಶಕ್ಕೆ ೫ ಸಾವಿರ ವರ್ಷಗಳ ಚರಿತ್ರೆ ಇದೆ. ಈ ಚರಿತ್ರೆಯ ಜತೆಗೆ ಚಾರಿತ್ರವೂ ಬೇಕು. ದೇಶ ನಿರ್ಮಾಣ ಎಂದರೆ, ರಸ್ತೆ, ಕಟ್ಟಡ ನಿರ್ಮಿಸಿದಂತೆ ಅಲ್ಲ. ಮಾನವೀಯ ಗುಣಗಳಿಂದ ದೇಶ ನಿರ್ಮಾಣ ಆಗುತ್ತದೆ, ಇದನ್ನು ಸ್ಕೌಟ್ಸ್-ಗೈಡ್ಸ್ ಮಾಡುತ್ತಾರೆ.
ಆಚಾರ್ಯರು ಸಾಕಷ್ಟು ಮಂದಿ ಇದ್ದಾರೆ, ಆದರೆ ಆಚರಣೆ ಬೇಕು. ಗೌತಮಬುದ್ಧ, ಮಹಾವೀರ, ಶಂಕರಾಚಾರ್ಯ, ಗುರುನಾನಕ್, ಕಬೀರ, ಕನಕದಾಸ, ಬಸವಣ್ಣ ಮುಂತಾದವರ ದೊಡ್ಡ ತತ್ವದ ಭಂಡಾರವೇ ದೇಶದಲ್ಲಿದೆ. ಇದನ್ನು ಸ್ಕೌಟ್ಸ್-ಗೈಡ್ಸ್ , ಎನ್‌ಸಿಸಿಗಳು ಮೌನವಾಗಿ ಆಚರಿಸಿಕೊಂಡು ಬರುತ್ತಿವೆ ಎಂದು ಶ್ಲಾಘಿಸಿದರು.
ನಾಗರಿಕತೆ-ಸಂಸ್ಕೃತಿ ಗೊಂದಲ ಪ್ರಸ್ತುತ ಕಾಲಘಟ್ಟದಲ್ಲಿ ನಾಗರಿಕತೆ ಮತ್ತು ಸಂಸ್ಕೃತಿಯ ಬಗ್ಗೆ ಯುವಕರಲ್ಲಿ ಬಹಳಷ್ಟು ಗೊಂದಲಗಳಿವೆ. ಪಾಶ್ಚಾತ್ಯ ಸಂಸ್ಕೃತಿಯ ದಾಳಿಯಿಂದ ಈ ಪರಿಸ್ಥಿತಿ ಉಂಟಾಗಿದೆ. ದೇಶದಲ್ಲಿ ನಗರ, ಹಳ್ಳಿಗಳು ಬೆಳೆಯುತ್ತಿದ್ದು, ಜನರ ಜೀವನಮಟ್ಟ ಸುಧಾರಿಸಿದೆ. ಇದು ಸಂಸ್ಕೃತಿಯಲ್ಲ, ನಾಗರಿಕತೆ. ನಾವು ನಾವಾಗಿಯೇ ಇರುವುದು ಸಂಸ್ಕೃತಿ. ಸನಾತನ ಧರ್ಮದ ಮೂಲವನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತೇವೆ ಎಂಬುದೇ ಇಲ್ಲಿ ಮುಖ್ಯವಾಗಿದೆ ಎಂದರು.
ಸ್ಕೌಟ್ ಗೈಡ್ಸ್ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಅನಿಲ್ ಜೈನ್ ಮಾತನಾಡಿ, ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಜಾಂಬೂರಿ ಆಯೋಜನೆಗೆ ಅವಕಾಶ ಮಾಡಿಕೊಟ್ಟ ಕರ್ನಾಟಕ ಸರ್ಕಾರಕ್ಕೆ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಕೃತಜ್ಞತೆಗಳು. ಜಾಂಬೂರಿ ಮೂಲಕ ಪ್ರಧಾನಿಯವರ ಏಕ್ ಭಾರತ್-ಶ್ರೇಷ್ಠ ಭಾರತ್ ಪರಿಕಲ್ಪನೆ ಅ ನಾವರಣಗೊಂಡಿದೆ. ಸಾಂಸ್ಕೃತಿಕ, ಪರಂಪರೆ, ಸಾಂಪ್ರದಾಯಿಕ ವೈಭವ ಈ ಮೂಲಕ ಮೇಳೈಸಿದ್ದು, ಯುವ ಸಾಂಸ್ಕೃತಿಕ ಒಗ್ಗಟ್ಟು ಎದ್ದುಕಾಣುತ್ತಿದೆ ಎಂದು ಹೇಳಿದರು.
ಡಾ.ಎಂ.ಮೋಹನ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಒಳ್ಳೆಯ ಮನಸ್ಸು ಕಟ್ಟುವ ನೆಲೆಯಲ್ಲಿ ಜಾಂಬೂರಿ ಆಯೋಜಿಸಲಾಗಿದೆ. ಸಹಭಾಳ್ವೆ, ದೇಶಪ್ರೇಮ, ಸೇವಾಮ ನೋಭಾವ, ಭಾತೃತ್ವ ಮನೋಭಾವ ಮೂಡಿಸಲು ಸ್ಕೌಟ್ ಆಂಡ್ ಗೈಡ್ಸ್ ನಿಂದ ಸಾಧ್ಯ. ದೇಶದಲ್ಲಿ 48 ಕೋಟಿ ಹಾಗೂ ರಾಜ್ಯದಲ್ಲಿ 1 ಕೋಟಿ 1 ರಿಂದ ಪಿಜಿ ಕಲಿಯುವ ವಿದ್ಯಾರ್ಥಿಗಳಿದ್ದಾರೆ.
ಸಚಿವರಾದ ಸುನಿಲ್ ಕುಮಾರ್, ನಾಗೇಶ್, ನಾರಾಯಣ್ ಗೌಡ, ಶಾಸಕ ಉಮಾನಾಥ ಕೋಟ್ಯಾನ್, ಲಾಲಾಜಿ ಮೆಂಡನ್, ಸಿ.ಟಿ. ರವಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ, ಆಜಿಪಿ ಚಂದ್ರ ಗುಪ್ತ, ಜಿಲ್ಲಾಧಿಕಾರಿ ರವಿ ಕುಮಾರ್, ಪೊಲೀಸ್ ವರಿಷ್ಠಧಿಕಾರಿ ಋಷಿ ಕೇಶ್ ಸೋಣಾವನೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಾ. ಕುಮಾರ್, ಮೂಡಬಿದ್ರೆ ಪುರಸಭಾ ಅಧ್ಯಕ್ಷ ಪ್ರಸಾದ್, ಉದ್ಯಮಿ ಕೆ. ಶ್ರೀಪತಿ ಭಟ್ ಮತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅತಿಥಿಗಳು ವೇದಿಕೆಗೆ ಆಗಮಿಸುತಿದ್ದಂತೆ ಸ್ಕೌಟ್ಸ್ ಗೈಡ್ಸ್ ಗೈಡ್ಸ್ ಗೌರವ ಸಲ್ಲಿಸಲಾಯಿತು. ವಂದೇ ಮಾತರಂ ಹಾಡಿನ ಬಳಿಕ ಕೋಟಿ ಕಂಟನ್ಸೆ ಹಾಡಿಗೆ ಸೇರಿದ್ದ ಸಹಸ್ರಾರು ವಿದ್ಯಾರ್ಥಿಗಳು ತಮ್ಮ ಕೈಯಲ್ಲಿದ್ದ ರಾಷ್ಟ್ರ ಪತಾಕೆಗಳನ್ನು ಮೇಲೆತ್ತಿ ಬೀಸುತ್ತ ಗೌರವ ಸಲ್ಲಿಸಿದರು.