ಸಾಮಾಜಿಕ ನ್ಯಾಯ ನನ್ನ ಉಸಿರು

Advertisement

ಬೆಳಗಾವಿ: ಸಮಾಜದ ಎಲ್ಲಾ ಜಾತಿ-ವರ್ಗದ ಜನಗಳು ಸಂಘಟಿತರಾಗಿ ಪ್ರಯತ್ನ ಪಟ್ಟಾಗಲೇ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಇಂತಹ ಸಮಾವೇಶಗಳು ಅತ್ಯಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಶೇಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್‌ನ ೯ನೇ ರಾಷ್ಟ್ರೀಯ ಸಮಾವೇಶದಲ್ಲಿ ರಾಷ್ಟ್ರೀಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಅವಕಾಶ ವಂಚಿತ ಜಾತಿಗಳ ಜನ ತಮ್ಮ ಸಂವಿಧಾನಬದ್ದ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಸಮಾವೇಶ ನಡೆಸುವುದು ತಪ್ಪಲ್ಲ ಎಂದು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಹೇಳಿದ್ದರು. ಅದರಂತೆ ಈ ಸಮಾವೇಷ ನಡೆಯುತ್ತಿದೆ. ನಾನು ಯಾವತ್ತೂ ಜಾತಿ ಮಾಡುವವನಲ್ಲ. ಸಾಮಾಜಿಕ ನ್ಯಾಯ ನನ್ನ ಉಸಿರು ಎಂದು ಟೀಕಾಕಾರರಿಗೆ ಸಿದ್ದರಾಮಯ್ಯ ದಿಟ್ಟ ಉತ್ತರ ನೀಡಿದರು.
ಆಶಕ್ತ ಸಮುದಾಯಗಳು ಸಂಘಟಿತರಾಗದೇ ಇರುವುದರಿಂದ ಮತ್ತು ತಮ್ಮಲ್ಲಿ ನಾಯಕತ್ವ ಬೆಳೆಸಿಕೊಳ್ಳದೇ ಇರುವುದರಿಂದ ಅವರ ಪಾಲಿನ ಹಕ್ಕುಗಳು ಮತ್ತು ರಾಜಕೀಯ ಅಧಿಕಾರದಿಂದ ವಂಚಿತವಾಗಿವೆ ಎಂದ ಅವರು, ಅದೆಷ್ಟೋ ಸಮಾಜದವರು ಇಂದಿಗೂ ವಿಧಾನಸೌಧದ ಮೆಟ್ಟಿಲು ಏರಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ನಾನು ಈ ಜಾತಿ ವ್ಯವಸ್ಥೆಗೆ ಯಾವತ್ತಿದ್ದರೂ ವಿರುದ್ಧ. ಆದರೆ ಆಶಕ್ತ ಜನ ಸಮುದಾಯಗಳು ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತರಾಗುವುದು ತಪ್ಪಲ್ಲ ಎಂದು ನಂಬಿದ್ದೇನೆ ಎಂದವರು ಅಭಿಪ್ರಾಯಪಟ್ಟರು.