ಸಾಲ ಮರುಪಾವತಿಸುವಂತೆ ಪತ್ನಿ, ಪುತ್ರನಿಗೆ ಗೃಹ ಬಂಧನ: ಮನನೊಂದು ರೈತ ಆತ್ಮಹತ್ಯೆ

Advertisement

ಚಿಕ್ಕೋಡಿ: ಸಾಲ ಮರುಪಾವತಿ ವಿಳಂಬವಾಗಿದ್ದಕ್ಕೆ ಮಹಿಳೆಯೊಬ್ಬಳು ಪತ್ನಿ ಹಾಗೂ ಪುತ್ರನನ್ನು ಗೃಹ ಬಂಧನದಲ್ಲಿಟ್ಟಿದ್ದಕ್ಕೆ ಮನನೊಂದು ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಹುಕ್ಕೇರಿಯ ಇಸ್ಲಾಂಪುರದಲ್ಲಿ ಸೋಮವಾರ ಸಂಜೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ರಾಜು ಖೋತಗಿ ಎಂದು ಗುರುತಿಸಲಾಗಿದೆ. ರೈತನಾಗಿದ್ದ ರಾಜು, ಭೀಕರ ಬರದಿಂದ ಬೆಳೆ ನಷ್ಟದಿಂದ ಅದೇ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಮಹಿಳೆ ಬಳಿ ೫ ತಿಂಗಳ ಹಿಂದೆ ೧.೫ ಲಕ್ಷ ರೂ. ಸಾಲ ಮಾಡಿದ್ದರು. ಎರಡು ದಿನದ ಹಿಂದೆ ಒಂದೇ ಬಾರಿಗೆ ಹಣ ಕೊಡುವಂತೆ ಸಿದ್ದವ್ವ ಕೇಳಿದ್ದಾಳೆ. ಹಣ ಕೊಡುವ ತನಕ ರೈತನ ಪತ್ನಿ ಹಾಗೂ ಪುತ್ರನನ್ನು ಮನೆಯಲ್ಲಿ ಬಿಟ್ಟು ಹೋಗುವಂತೆ ಹೇಳಿದ್ದಳು. ಬಳಿಕ ರೈತನ ಪತ್ನಿ ಹಾಗೂ ಪುತ್ರನನ್ನು ಎರಡು ದಿನದಿಂದ ಗೃಹ ಬಂಧನದಲ್ಲಿಟ್ಟಿದ್ದಳು. ಸಿದ್ದವ್ವಳ ಬಳಿ ರಾಜು ತನ್ನ ಪತ್ನಿ ಹಾಗೂ ಪುತ್ರನನ್ನು ಗೃಹಬಂಧನದಿಂದ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಆಕೆ ಒಪ್ಪಲಿಲ್ಲ. ರಾಜು ಪಡೆದಿದ್ದ ಸಾಲಕ್ಕೆ ಪ್ರತಿ ತಿಂಗಳು ಶೇ.೧೦ ರಷ್ಟು ಬಡ್ಡಿ ಕಟ್ಟುತ್ತಿದ್ದರು. ಅಲ್ಲದೇ ಒಂದೇ ಬಾರಿ ಹಣ ಮರಳಿಸುವಂತೆ ಸಿದ್ದವ್ವ ಕೇಳಿದಾಗ ಎರಡು ದಿನ ಕಾಲಾವಕಾಶ ಕೇಳಿದ್ದ ಎಂದು ತಿಳಿದು ಬಂದಿದೆ.
ಒಂದು ದಿನದ ಬಳಿಕ ರಾಜುನನ್ನು ಬಿಡುಗಡೆ ಮಾಡಿ, ಮಗ ಮತ್ತು ಪತ್ನಿಯನ್ನು ಗೃಹಬಂಧನದಲ್ಲಿಟ್ಟಳು. ಈ ಸಂಬಂಧ ದೂರು ನೀಡಲು ತೆರಳಿದಾಗ ಪೊಲೀಸರು ವಿಳಂಬ ಮಾಡಿದ್ದಾರೆ. ಬೆಳಗ್ಗೆಯಿಂದ ಠಾಣೆಯಲ್ಲಿ ಕೂರಿಸಿಕೊಂಡು ರಾತ್ರಿ ವೇಳೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ಯಮಕನಮರಡಿ ಠಾಣೆ ಪೊಲೀಸರ ವಿರುದ್ಧ ರೈತನ ಕುಟುಂಬಸ್ಥರು ಆರೋಪಿಸಿದ್ದಾರೆ.