ಸಾವರ್ಕರ್ ಬೋರ್ಡ್‌, ಭಗವಾಧ್ವಜ ತೆರವು

Advertisement

ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಿ ನಗರ ನಾಮಫಲಕ ಅಳವಡಿಸಿದ್ದನ್ನು ಕಿತ್ತು ಹಾಕಿದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ತೆಂಗಿನಗುಂಡಿಯಲ್ಲಿ ವೀರ ಸಾವರ್ಕರ್ ಬೀಚ್ ಬೋರ್ಡ್‌ ಪ್ರಕರಣ ಹಾಗೂ ಭಗವಾಧ್ವಜ ತೆರವುಗೊಳಿಸಿದ ಪ್ರಕರಣ ಹಿಂದೂ ಕಾರ್ಯಕರ್ತರನ್ನು ಇನ್ನಷ್ಟು ಕೆರಳುವಂತೆ ಮಾಡಿದೆ.
೨೦೨೨ರ ಎಪ್ರಿಲ್‌ನಲ್ಲಿ ಗ್ರಾಮ ಪಂಚಾಯತ್‌ನಲ್ಲಿ ವೀರಸಾವರ್ಕರ್ ಬೀಚ್ ಎಂದು ನಾಮ ಫಲಕ ಹಾಕಲು ಚರ್ಚೆಯಾಗಿ ಠರಾವಿನಲ್ಲಿ ಈ ಕುರಿತು ಕ್ರಮ ವಹಿಸುವುದು ಎಂದು ನಮೂದಿಸಲಾಗಿದ್ದು ಅಂದಿನ ಅಧ್ಯಕ್ಷರು ಈ ಬಗ್ಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇಲ್ಲಿನ ತನಕವೂ ಕೂಡಾ ಯಾವುದೇ ಲಿಖಿತ ಉತ್ತರ ದೊರೆತಿಲ್ಲ ಎನ್ನಲಾಗಿದೆ. ವೀರಸಾವರ್ಕರ್ ಬೀಚ್ ಎಂದು ಒಂದು ಕಟ್ಟೆಯನ್ನು ಕಟ್ಟಿ ಅದಕ್ಕೆ ಒಂದು ಕಂಬವನ್ನು ನೆಟ್ಟು ಬೋರ್ಡ್‌ ಹಾಕಲಾಗಿದ್ದು ಅದರಲ್ಲಿರುವ ಕಂಬಕ್ಕೆ ಭಗವಾ ಧ್ವಜವನ್ನು ಕೂಡಾ ಕಟ್ಟಲಾಗಿತ್ತು.
ಇತ್ತೀಚೆಗೆ ಜಾಲಿಯಲ್ಲಿ ನಡೆದ ಪ್ರಕರಣದಂತೆ ಇಲ್ಲಿಯೂ ಕೂಡಾ ಗ್ರಾಮ ಪಂಚಾಯತ್ ವತಿಯಿಂದ ಬೋರ್ಡ್‌ನ್ನು ತೆರವುಗೊಳಿಸಲಾಗಿದ್ದು ಹಿಂದೂ ಸಂಘಟನೆಯ ಕಾರ್ಯಕರ್ತರು, ಬಿಜೆಪಿ ಪ್ರಮುಖರು ಹಾಗೂ ಗ್ರಾಮ ಪಂಚಾಯತ್ ಸದಸ್ಯರನ್ನು ಕೆರಳಿಸಲು ಕಾರಣವಾಗಿದೆ ಎನ್ನಲಾಗಿದೆ.