ಸಾಹಸಮಯ ತನಿಖೆ

Advertisement

-ಜಿ.ಆರ್.ಬಿ

ಮರ್ಡರ್ ಮಿಸ್ಟರಿ ಕಥಾಹಂದರವಿರುವ ಸಿನಿಮಾ-ಅಲೆಕ್ಸಾ. ಗಂಡ ಹೆಂಡತಿ ಕೊಲೆಯ ಹಿನ್ನೆಲೆಯನ್ನು ಅರಸಿಕೊಂಡು ಹೊರಡುವುದರಿಂದ ತೆರೆದುಕೊಳ್ಳುವ ಪ್ರಮುಖ ಕಥನನ ಹಿಂದೆ ಹಲವಾರು ಘಟನೆಗಳು ದಾಖಲಾಗಿರುತ್ತವೆ. ಹಂತ ಹಂತವಾಗಿ ಒಂದೊಂದೇ ಎಳೆ ಬಿಚ್ಚಿಕೊಳ್ಳುತ್ತಾ ಸಾಗುವ ಈ ಚಿತ್ರದಲ್ಲಿ ಫಾರ್ಮಾಸೂಟಿಕಲ್ ಮಾಫಿಯಾ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.
ಕೊಲೆಯ ಜಾಡು ಹಿಡಿದು ಬರುವ ತನಿಖಾಧಿಕಾರಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ತನಿಖೆಯ ಜತೆ ಜತೆಗೆ ಒಂದಷ್ಟು ಸಾಹಸಮಯ ದೃಶ್ಯಗಳಲ್ಲೂ ಪಾಲ್ಗೊಂಡಿರುವುದು ಅದಿತಿ ಹೆಚ್ಚುಗಾರಿಕೆ. ತನಿಖೆ ಎಂದ ಮೇಲೆ ಸಾಕಷ್ಟು ಕುತೂಹಲಕಾರಿ ಅಂಶಗಳು, ಟ್ವಿಸ್ಟ್‌ಗಳಿವೆ. ಕೆಲವೊಮ್ಮೆ ಅದು ಥ್ರಿಲ್ಲಿಂಗ್ ಅನುಭವಕ್ಕೂ ದಾರಿ ಮಾಡಿಕೊಡುತ್ತದೆ.
ನಾಯಕ ಪ್ರವೀಣ್ ತೇಜ್ ತನಿಖೆಯ ಸಹಭಾಗಿ. ಕುತೂಹಲಕಾರಿ ಘಟ್ಟದ ನಡುವೆ ಕೆಲವೊಂದು ಅಂಶಗಳು ಚಿತ್ರದ ಓಘವನ್ನು ನಿಧಾನಗತಿಯಲ್ಲಿ ಸಾಗುವಂತೆ ಮಾಡುತ್ತದೆ. ಅದಾಗ್ಯೂ ಅದನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ನಿರ್ದೇಶಕ ಜೀವ ಕಾರ್ಯವೈಖರಿ ಮೆಚ್ಚುವಂತಿದೆ.
ಸಿನಿಮಾ ಮುಕ್ತಾಯದ ಹಂತ ಕಾಣುತ್ತಲೇ ಎರಡನೇ ಭಾಗಕ್ಕೆ ಲೀಡ್ ಸಿಗುತ್ತದೆ. ಸಸ್ಪೆನ್ಸ್-ಥ್ರಿಲ್ಲರ್ ಜಾನರ್‌ನ ಸಿನಿಮಾಗಳಲ್ಲಿ ಹಾಡಿಗೆ ಹೆಚ್ಚು ಒತ್ತು ನೀಡದಿದ್ದರೂ, ಹಿನ್ನೆಲೆ ಸಂಗೀತಕ್ಕೆ ಪ್ರಾಶಸ್ತö್ಯ ಕೊಡಬೇಕಾಗುತ್ತದೆ. ಆದರೂ ಈ ಸಿನಿಮಾದಲ್ಲಿ ಮೂರು ಹಾಡುಗಳಿವೆ. ಎಪಿಒ ಸಂಗೀತ ಸಂಯೋಜನೆ, ಸತೀಶ್ ಸಿನಿಮಾಟೋಗ್ರಫಿ ಚಿತ್ರಕ್ಕೆ ಪೂರಕವಾಗಿದೆ. ಉಳಿದಂತೆ ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ಗಮನ ಸೆಳೆಯುತ್ತಾರೆ.