ಸಾಹಿತ್ಯ ಸಮ್ಮೇಳನದಲ್ಲಿ ಮೃತ ಕಲಾವಿದನಿಗೆ ಅವಕಾಶ..!

Advertisement

ಶ್ರೀಕಾಂತ ಸರಗಣಾಚಾರಿ
ಕುಷ್ಟಗಿ: ಕಸಾಪ ಜಿಲ್ಲಾ 12ನೇ ಸಮ್ಮೇಳನ ಹನುಮಸಾಗರದಲ್ಲಿ ಮಾ. 5 ಮತ್ತು 6ರಂದು ನಡೆಯಲಿದೆ. ಮೃತ ಕಲಾವಿದರ ಹೆಸರನ್ನು ಸಹ ಆಮಂತ್ರಣದಲ್ಲಿ ಮುದ್ರಿಸುವುದರ ಮೂಲಕ ಎಡವಟ್ಟು ಮಾಡಿಕೊಂಡಿದೆ. ಹನುಮಸಾಗರ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಎರಡು ದಿನ ಸಮ್ಮೇಳನ ಜರುಗಲಿದೆ. ಈ ಸಮ್ಮೇಳನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಮೃತಪಟ್ಟ ಕಲಾವಿದನಿಗೆ ಹಾಡಲು ಅವಕಾಶ:
ತೆಗ್ಗಿಹಾಳದ ಚೌಡಕಿ ಕಲಾವಿದ ರಾಮಣ್ಣ ಚೌಡಕಿ ಅವರ ಹೆಸರನ್ನು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚೌಡಕಿ ಪದ ಹಾಡಲು ಅವಕಾಶ ಕಲ್ಪಿಸಿದೆ. ಸಮ್ಮೇಳನದ ಆಹ್ವಾನ ಪತ್ರದಲ್ಲಿ ಮುದ್ರಿಸಿದಂತೆ ಮಾ. 6ರಂದು ರಾತ್ರಿ ನಿಗದಿಯಾದ ಕಾರ್ಯಕ್ರಮದಲ್ಲಿ ಮೃತಪಟ್ಟ ಕಲಾವಿದ ರಾಮಣ್ಣ ಚೌಡಕಿ ಅವರಿಂದ ಚೌಡಕಿ ಪದ, ಸಾಂಸ್ಕೃತಿಕ ಕಾರ್ಯಕ್ರಮ ಎಂದಿದೆ. ಇದು ನಿರ್ಲಕ್ಷ್ಯದ ಪರಮಾವಧಿ.
ಸಮನ್ವಯದ ಕೊರತೆ:
ಜಿಲ್ಲಾಧ್ಯಕ್ಷ ಶರಣೇಗೌಡ ಹಾಗೂ ಕುಷ್ಟಗಿ ತಾಲೂಕು ಅಧ್ಯಕ್ಷ ವಿರೇಶ ಬಂಗಾರ ಶೆಟ್ಟರ್ ಹಾಗೂ ಪದಾಧಿಕಾರಿಗಳ ಮಧ್ಯದಲ್ಲಿ ಸಮನ್ವಯ ಕೊರತೆಯಿಂದಾಗಿ ಇಂತಹ ಆಚಾತುರ್ಯವಾದಂತಿದೆ. ಇದು ಕಸಾಪ ಪದಾಧಿಕಾರಿಗಳು ಅಜೀವ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೃತಪಟ್ಟ ಕಲಾವಿದ ರಾಮಣ್ಣ ಅವರು ಹೇಗೆ ಚೌಡಕಿ ಪದಗಳನ್ನು ಹಾಡುವ ಮೂಲಕ ರಂಜಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಬಹುತೇಕರ ಗಮನಕ್ಕಿಲ್ಲ
ಪ್ರತಿಯೊಬ್ಬರ ಸಲಹೆ ಸೂಚನೆ ಪಡೆದು ನಿರ್ಧಾರ ಕೈಗೊಳ್ಳಬೇಕು. ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಬಹುತೇಕರ ಗಮನಕ್ಕಿಲ್ಲ. ಸಮಾಜಮುಖಿ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಬೇಕಿದೆ.

ಮುತ್ತಣ್ಣ ಗೋತಗಿ, ದೋಟಿಹಾಳ.