ಹುಬ್ಬಳ್ಳಿ: ಕಾಂಗ್ರೆಸ್‌ನವರಿಗೆ ಬಿಜೆಪಿಯಲ್ಲಿ ತಪ್ಪು ಹುಡುಕಲು ಏನು ಇಲ್ಲ. ಹೀಗಾಗಿ ಜನರ ಮಧ್ಯದಲ್ಲಿ ಇರುವ ದೃಷ್ಟಿಯಿಂದ ಸಿಎಂ ಬದಲಾವಣೆ ಬಗ್ಗೆ ಕಪೋಲಕಲ್ಪಿತ ಸುದ್ದಿ ಹರಡುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವುದೇ ಕಾಯವಾಗಿದೆ ಎಂದರು.
ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ, ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಈ ಸರ್ಕಾರವು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪೂರ್ಣಾವಧಿ ಆಡಳಿತ ನಡೆಸಲಿದೆ. ಕಾಂಗ್ರೆಸ್‌ನವರಿಗೆ ತಮ್ಮ ಬಳಿ ಜನ ಇದ್ದಾರೆ ಎಂಬುದನ್ನು ತೋರಿಸಿಕೊಳ್ಳಬೇಕಿತ್ತು. ಹೀಗಾಗಿ ಹಣ ಹಂಚಿ ಸಿದ್ದರಾಮೋತ್ಸವ ಮಾಡಿದ್ದಾರೆ. ಅದರಿಂದ ಬಿಜೆಪಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಸ್ವಾತಂತ್ರ್ಯ ಅಮೃತ ಮಹೋತ್ಸವ ಡೋಂಗಿ ಎನ್ನುವ ಸಿದ್ದರಾಮಯ್ಯ ಹಳದಿ ಕಣ್ಣಿನಿಂದ ನೋಡುವುದು ಬಿಡಲಿ. ಅವರು ಈ ದೇಶದಲ್ಲಿ ಹುಟ್ಟಿಲ್ಲವೆ? ಅವರಿಗೆ ದೇಶದ ಬಗ್ಗೆ ಗೌರವ ಇಲ್ಲವೆ ಎಂದು ಪ್ರಶ್ನಿಸಿದರು.