ಸಿಕ್ಕಿಂನಲ್ಲಿ ಮೇಘಸ್ಫೋಟ: ಹಠಾತ್ ಪ್ರವಾಹದಲ್ಲಿ 23 ಸೈನಿಕರು ನಾಪತ್ತೆ

Advertisement

ಮೇಘಸ್ಫೋಟದಿಂದ ಸಿಕ್ಕಿಂನ ತೀಸ್ತಾ ನದಿಯಲ್ಲಿ ಉಂಟಾದ ದಿಢೀರ್​ ಪ್ರವಾಹದಲ್ಲಿ ಸಿಲುಕಿ 23 ಸೇನಾ ಸಿಬ್ಬಂದಿ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಸೈನಿಕರ ಪತ್ತೆಗಾಗಿ ಬಹು ದೊಡ್ಡ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿರುವುದಾಗಿ ಸೇನೆ ತಿಳಿಸಿದೆ. ನದಿ ಉಕ್ಕಿ ಹರಿಯುತ್ತಿರುವುದರಿಂದ ತೀಸ್ತಾ ನದಿಯ ಮೇಲಿನ ಸಿಂಗ್‌ತಮ್ ಕಾಲು ಸೇತುವೆ ಕುಸಿದಿದೆ. ಪಶ್ಚಿಮ ಬಂಗಾಳದಿಂದ ಸಿಕ್ಕಿಂಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳು ಕೊಚ್ಚಿ ಹೋಗಿವೆ. ಭಾರೀ ಪ್ರವಾಹದ ಹಿನ್ನೆಲೆ ಅನೇಕ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಿಕ್ಕಿಂನಲ್ಲಿ ರಾತ್ರಿಯಿಡಿ ಭಾರೀ ಮಳೆಯಾಗಿದೆ. ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಮೇಲೆ ಸಂಭವಿಸಿದ ಮೇಘಸ್ಫೋಟವು ತೀಸ್ತಾ ನದಿಯಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಿತು. ಇದರಿಂದ ಭಾರೀ ಪ್ರವಾಹ ಉಂಟಾಯಿತು. ಅಂದಹಾಗೆ ತೀಸ್ತಾ ನದಿಯು ಬಾಂಗ್ಲಾದೇಶವನ್ನು ಪ್ರವೇಶಿಸುವ ಮೊದಲು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿಯುತ್ತದೆ.