ಸಿಟಿ ಸಬ್ ಅರ್ಬನ್ ಬಸ್ ಓಡಿಸಲು ಮನವಿ

ಹೆಬ್ಬಳ್ಳಿ
Advertisement

ಹೆಬ್ಬಳ್ಳಿ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಹುಬ್ಬಳ್ಳಿಯಿಂದ ಸಿಟಿ ಸಬ್ ಅರ್ಬನ್ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಹೆಬ್ಬಳ್ಳಿ, ಮಾರಡಗಿ, ಶಿವಳ್ಳಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರ ನಿಯೋಗ ಬುಧವಾರ ಹೆಬ್ಬಳ್ಳಿ ಗ್ರಾಪಂ ಉಪಾಧ್ಯಕ್ಷ ವಿಠ್ಠಲ ಇಂಗಳೆ ಅವರ ನೇತೃತ್ವದಲ್ಲಿ ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಅವರಿಗೆ ಮನವಿ ಸಲ್ಲಿಸಿತು.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಪ್ರಯಾಣಿಕರು ಹುಬ್ಬಳ್ಳಿ ನಗರಕ್ಕೆ ಬರಲು ಹೆಬ್ಬಳ್ಳಿ ಬಸ್ ಒಂದೇ ಆಧಾರವಾಗಿದೆ. ಹೀಗಾಗಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ಹುಬ್ಬಳ್ಳಿ-ಹೆಬ್ಬಳ್ಳಿ ನಡುವೆ ೧೮ ಕಿಮೀ ಅಂತರವಿದೆ. ಇದು ಸಿಟಿ ಸಬ್ ಅರ್ಬನ್ ಬಸ್ ಓಡಿಸಬಹುದಾದ ಅಂತರವೇ ಆಗಿದೆ. ಹೀಗಾಗಿ ಆದಷ್ಟು ಬೇಗ ಹೆಬ್ಬಳ್ಳಿಗೆ ಸಿಟಿ ಸಬ್ ಅರ್ಬನ್ ಬಸ್ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಹುಬ್ಬಳ್ಳಿ-ಸವದತ್ತಿ ಬಸ್ ಹೆಬ್ಬಳ್ಳಿ ಮಾರ್ಗದಿಂದ ಬಸ್ ಸಂಚರಿಸುತಿತ್ತು. ಕೋವಿಡ್ ಬಂದ ನಂತರ ಈ ಬಸ್ ಸಂಚಾರ ಬಂದ್ ಆಗಿದೆ. ಇದರಿಂದ ಧಾರವಾಡ ಹಾಗೂ ಸವದತ್ತಿ ತಾಲೂಕಿನ ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಹೀಗಾಗಿ ಆದಷ್ಟು ಬೇಗ ಆ ಹುಬ್ಬಳ್ಳಿ – ಸವದತ್ತಿ (ವಾಯಾ: ಹೆಬ್ಬಳ್ಳಿ) ಬಸ್ ನ್ನು ಪುನಃ ಆರಂಭಿಸಬೇಕು. ಅಲ್ಲದೆ ಈಗ ಸಂಚರಿಸುವ ಹುಬ್ಬಳ್ಳಿ -ಸವದತ್ತಿ ಕೆಲ ಬಸ್ ಗಳನ್ನು ಹೆಬ್ಬಳ್ಳಿ ಮಾರ್ಗವಾಗಿ ಸಂಚರಿಸುವಂತೆ ತಕ್ಷಣವೇ ವಿಭಾಗೀಯ ಅಧಿಕಾರಿ(ಡಿಸಿ) ಅವರಿಗೆ ಸೂಚಿಸಬೇಕು ಎಂದು ನಿಯೋಗ ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಅವರನ್ನು ಒತ್ತಾಯಿಸಿತು.
ಈ ಸಂದರ್ಭದಲ್ಲಿ ಹೆಬ್ಬಳ್ಳಿ ಗ್ರಾಪಂ ಸದಸ್ಯರುಗಳಾದ ಬಸವರಾಜ ಹೆಬ್ಬಾಳ, ಬಸವರಾಜ ಲಕ್ಕಮನವರ, ಅಶೋಕ ಲಕ್ಕಮನರ, ಧಾರವಾಡ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಮಾಜಿ ಸದಸ್ಯ ಹಣಮಂತ ಮಾರಡಗಿ, ಹೆಬ್ಬಳ್ಳಿ ಗ್ರಾಮಸ್ಥರಾದ ಅಶೋಕ ಬ್ಯಾಹಟ್ಟಿ, ಧನಪಾಲ ಸನದಿ ಸೇರಿದಂತೆ ಮೊದಲಾವರು ನಿಯೋಗದಲ್ಲಿ ಇದ್ದರು.