ಸಿಟ್ಟಿಗೆದ್ದ ರಾಖಿ-ಏನುಳಿದಿದೆ ಬಾಕಿ?

Advertisement

ಲಾದುಂಚಿ ಸಾವಂತಪ್ಪನ ಹಿರೇಮಗಳು ರಾಖಿ ಸಿಟ್ಟಿಗೆದ್ದ ಸುದ್ದಿ ಎಲ್ಲೆಡೆ ಹರಡಿದೆ. ಅವಳು ಯಾಕೆ ಸಿಟ್ಟಿಗೆದ್ದಳು? ಇದಕ್ಕೆ ಕಾರಣವೇನು? ಸಿಟ್ಟಿಗೇಳುವಂತೆ ಮಾಡಿದವರು ಯಾರು? ಇದನ್ನು ಸಿಬಿಐಗೆ ವಹಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಅನೇಕ ಸಂಘಟನೆಗಳು ಸಜ್ಜಾಗಿವೆ. ಪ್ರತಿದಿನ ರಾಖಿ ಮನೆಯಲ್ಲಿ ಏನು ಮಾತನಾಡಿಸಿದರೂ ಹಾಂ…ಹೂಂ ಎಂದೂ ಸಹ ಹೇಳುತ್ತಿರಲಿಲ್ಲ. ಹೊರಗಡೆ ಹೋದಾಗ ಗೆಳತಿಯರು ಮಾತನಾಡಿಸಿದರೆಂದರೆ ಸಿಡಿಮಿಡಿ ಗೊಳ್ಳುತ್ತಿದ್ದಳು. ಮನೆಯಲ್ಲಿ ಆಕೆಯ ತಮ್ಮ-ತಂಗಿಗೆ ಕೈಗೆ ಸಿಕ್ಕ ಕಸಬರಿಗೆಯಿಂದ ಬಡಿಯುತ್ತಿದ್ದಳು. ಬಾಗಿಲಲ್ಲಿ ಸುಮ್ಮನೇ ಮಲಗಿರುತ್ತಿದ್ದ ತನ್ನ ಸಾಕು ನಾಯಿಯ ಮೇಲೆ ಬಿಸಿನೀರು ಚೆಲ್ಲುತ್ತಿದ್ದಳು. ಆಕೆಯ ತಂದೆ ತಾಯಿ ಈಕೆಗೆ ಏನೋ ಆಗಿದೆ ಎಂದು ಕುಂಟ್ತಿರುಪ್ತಿ ಹತ್ತಿರ ಹೋಗಿ ತಾಯತ ಕಟ್ಟಿಸಿಕೊಂಡು ಬಂದರು. ಸಾವಂತಪ್ಪ ಡಾ. ತಿರ್ಮೂಲಿಯನ್ನು ಭೇಟಿಯಾಗಿ ಎಲ್ಲ ವಿಷಯ ಹೇಳಿ ಗಳಗಳನೇ ಅತ್ತ. ಕರಿಭಾಗೀರತಿ ಹೇಳಿದಳೆಂದು ಮೂರು ದಾರಿ ಕೂಡುವ ಕಡೆಗೆ ಲಿಂಬೆಹಣ್ಣು-ಹಸಿ ಮೆಣಸಿನಕಾಯಿ ದಾರದಲ್ಲಿ ಜೋಡಿಸಿ ಇಟ್ಟು ಬಂದರೂ ರಾಖಿ ಸಿಟ್ಟು ಸಿಟ್ಟು ಮಾಡಿಕೊಳ್ಳುವುದು ಕಡಿಮೆ ಆಗಲೇ ಇಲ್ಲ. ಗ್ವಾಡಿಯಮುನಪ್ಪನನ್ನು ಕರೆಯಿಸಿ ಮುಖ ಮಂತ್ರಿಸಿದರು. ಆಗಲೂ ಆಕೆ ತನ್ನ ಸಿಟ್ಟನ್ನು ಬಿಡಲಿಲ್ಲ. ಈಕೆಯ ಸ್ಥಿತಿ ನೋಡಿ ಕಲ್ಡೇರ್ ಮಮದ್ ಕಳ್ಳಿಸಾಲಿನಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದ. ಲಾದುಂಚಿ ರಾಜನಿಗೆ ಈ ವಿಷಯದ ಬಗ್ಗೆ ಧಿಗ್ಭ್ರಾಂತನಾಗಿದ್ದ. ಕಂಟ್ರಂಗಮ್ಮತ್ತಿ ಸಾವಂತಪ್ಪನ ಮನೆಗೆ ಹೋಗಿ ರಾಖಿಗೆ ಸಮಾಧಾನ ಹೇಳಿ ಬಂದಿದ್ದಳು. ಆಕೆಯ ಸಿಟ್ಟನ್ನು ಥಮ್ಮಣಿ ಮಾಡಲು ಏನೇನೋ ಪ್ಲಾನ್ ಮಾಡಿದರೂ ವರ್ಕೌಟ್ ಆಗಲೇ ಇಲ್ಲ. ಆಕೆಯನ್ನು ಕಂಡರೆ ಆಗದ ಪೂಜಾರಿ ಕುಪ್ಪಣ್ಣನ ಮಗ ಕುಲ್ಡ್ ಕಿಟ್ಯಾ ಮಾತ್ರ… ರಾಖಿ ಎಲ್ಲವನ್ನೂ ಮಾಡಿದ್ದಳು ಇದೊಂದೆ ಬಾಕಿ ಉಳಿದಿತ್ತು. ಅದನ್ನೂ ಮಾಡಿಬಿಟ್ಟಳು. ಸುಮ್ನೆ ಬಿಟ್ಟುಬಿಡಿ ಎರಡು ದಿನದಲ್ಲಿ ಸರಿಹೋಗುತ್ತಾಳೆ ಎಂದು ಹೇಳಿದ್ದಕ್ಕೆ ನಾಟಕದ ಮಾಸ್ಟರ್ ಕರೆಪ್ಪ ಆತನನ್ನು ಹಾರಾಡಿ ಬಡಿಯಲು ಹೋಗಿದ್ದ. ಆಕೆಯ ಸಿಟ್ಟಿಗೆ ಕಾರಣ ಹುಡುಕಿಕೊಂಡು ಬನ್ನಿ ನಾನು ಔಷಧ ಕೊಡುತ್ತೇನೆ ಎಂದು ಉಳ್ಳಾಗಡ್ಡಿ ಡಾಕ್ಟರ ಹೇಳಿದ್ದ. ಹೌದಲ್ವೇ ಎಂದು ಆಕೆಯ ತಂದೆ ಸಾವಂತಪ್ಪ, ರಾತ್ರಿ ಹೊತ್ತು ರಾಖಿಗೆ ಪಾನಕ ಕುಡಿಸಿ ಏನಮ್ಮಾ ನಿನ್ನ ಪ್ರಾಬ್ಲಮ್ಮು… ಯಾಕೆ ಸಿಟ್ಟಿಗೆದ್ದೆ ಒಂದು ಬಾರಿ ಹೇಳಿಬಿಡು… ಇಲ್ಲದಿದ್ದರೆ ನಾವು ಗಚ್ಚಿನಬಾವಿ ನೋಡಿಕೊಳ್ಳುತ್ತೇವೆ ಎಂದು ಹೇಳಿದ ಕೂಡಲೇ ಕೆಟ್ಟಮುಖ ಮಾಡಿದ ರಾಖಿ… ಅಪ್ಪ ನನ್ನ ಸಿಟ್ಟಿಗೆ ಕಾರಣ ಹೇಳಬೇಕೆ ಹಾಗಿದ್ದರೆ ಕೇಳು…. ಅಂಬಾನಿ ಮುಕೇಸಿ ತನ್ನ ಮಗನ ಮದುವೆ ಅಡ್ವಾನ್ಸ್ ಕಾರ್ಯಕ್ರಮಕ್ಕೆ ಯರ‍್ಯಾರನ್ನ ಕರೆದಿದ್ದ ನೀನೂ ನೋಡಿದ್ದಿ…. ಆದರೆ ನನಗೊಬ್ಬಳಿಗೇ ಕರೆದಿರಲಿಲ್ಲ. ಯಾಕೆ ನಾನು ಆತನಿಗೆ ಕಾಣಲಿಲ್ಲವೇ? ಏನೂ ಅಂತ ತಿಳಿದಿದ್ದಾನೆ ಆತ ಎಂದು ಗಂಟಲುಬ್ಬಿಸಿ ಅಳುತ್ತ ಹೇಳಿದಾಗ..ಸಾವಂತಪ್ಪ ಸಿಕ್ತಲೇ ಕಾರಣ ಎಂದು ಉಳ್ಳಾಗಡ್ಡಿ ಡಾಕ್ಟರ್ ಮನೆಯ ಕಡೆಗೆ ಓಡಿದ….