ಸಿದ್ದರಾಮಯ್ಯ ಸೋಲಿಸಲು ದಲಿತ ಮತದಾರ ಜಾಗೃತಿ ಅಭಿಯಾನ

ಜಾಗೃತಿ
Advertisement

ಕೋಲಾರ: ರಾಜ್ಯದಲ್ಲಿ ದಲಿತ ನಾಯಕರನ್ನು ಒಳಸಂಚು ಮಾಡಿ ಸೋಲಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಲು ದಲಿತ ಮತದಾರರನ್ನು ಜಾಗೃತಿ ಮೂಡಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಜಿಪಂ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಬಾಲಾಜಿ ಚೆನ್ನಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ದಲಿತ ಮತದಾರರ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ರಾಜ್ಯದಲ್ಲಿ ಹಂತಹಂತವಾಗಿ ಅಧಿಕಾರಕ್ಕಾಗಿ ದಲಿತ ನಾಯಕರನ್ನು ಸೋಲಿಸಿದ ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಅವರನ್ನು ಸೋಲಿಸಲು ದಲಿತ ಸಮುದಾಯ ನಿರ್ಣಯ ತೆಗೆದುಕೊಂಡಿದ್ದಾರೆ ಅದರಂತೆ ಕೋಲಾರ ಕ್ಷೇತ್ರದ ಮತದಾರರನ್ನು ಜಾಗೃತಿಗೊಳಿಸುವ ಕೆಲಸವನ್ನು ದಲಿತ ನಾಯಕರು ಮಾಡಲಿದ್ದಾರೆ ಎಂದರು.
ದೇಶದಲ್ಲಿ ಸುಮಾರು 75 ವರ್ಷದಿಂದ ದಲಿತ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ ಮುಖ್ಯಮಂತ್ರಿಯಾಗುವ ಸಮರ್ಥ ಹಾಗೂ ಅರ್ಹತೆ,ಅನುಭವ, ಪಕ್ಷನಿಷ್ಠೆ ಹೊಂದಿರುವ ದಲಿತ ಚುನಾಯಿತ ಜನಪ್ರತಿನಿಧಿಗಳು ಇದ್ದರೂ ಕಾಂಗ್ರೆಸ್ ಪಕ್ಷದಿಂದ ದಲಿತರಿಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿಲ್ಲ ಎಂದರು
ದಲಿತ ಮುಖಂಡ ದಲಿತ್ ನಾರಾಯಣಸ್ವಾಮಿ ಮಾತನಾಡಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ 2013 ರಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ರವರನ್ನು ಸೋಲಿಸುವ ಮೂಲಕ ದಲಿತ ನಾಯಕ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದ್ದಾರೆ ಕಾಂಗ್ರೆಸ್ ಪಕ್ಷದ ಪರ ಸದಾಕಾಲವೂ ಒಲವು ತೋರುತ್ತಿದ್ದರೂ, ಪಕ್ಷಕ್ಕೆ ವಲಸೆ ಬಂದು ದಲಿತರನ್ನು ದಮನ ಮಾಡಿ ತಾವು ಅಧಿಕಾರದ ಗದ್ದುಗೆ ಹಿಡಿದಿರುವ ಸಿದ್ದರಾಮಯ್ಯ ನವರು ರಾಜ್ಯದ ಎಲ್ಲೇ ಸ್ಪರ್ಧೆ ಮಾಡಲು ದಲಿತರ ವಿರೋಧವಿದೆಯೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ರಾಮಸಂದ್ರ ತಿರುಮಲೇಶ್ ಮಾತನಾಡಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಪಕ್ಷಾತೀತ ಅಹಿಂದ ನಾಯಕ ಎಂದು ಬಿಂಬಿಸಿಕೊಳ್ಳುವ
ಸಿದ್ದರಾಮಯ್ಯನವರಿಗೆ ಧೈರ್ಯ ಇದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಣೆ ಮಾಡಲಿ ಇಲ್ಲದೇ ಹೋದರೆ ದಲಿತ ಸಮುದಾಯ ಒಗ್ಗಟ್ಟನ್ನು ಪ್ರದರ್ಶನ ಮಾಡಿ ಸಿದ್ದರಾಮಯ್ಯ ನವರನ್ನು ಸೋಲಿಸಿದಾಗ ಮಾತ್ರ ದಲಿತ ಮುಖ್ಯಮಂತ್ರಿ ಮಾಡಲು ಅವಕಾಶವಿದೆ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಸಾಹುಕಾರ್ ಶಂಕರಪ್ಪ, ಮಂಜುನಾಥ್, ಅಶೋಕ್, ಅನಿಲ್ ಕುಮಾರ್, ಸುದರ್ಶನ್ ಇದ್ದರು