ಸಿದ್ದು, ಡಿಕೆಶಿಯದ್ದು ಕಲೆಕ್ಷನ್ ಸರ್ಕಾರ

Advertisement

ದಾವಣಗೆರೆ: ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರೂ ತಲೆ ಕೆಡಿಸಿಕೊಳ್ಳದ, ವಿದ್ಯುತ್ ಕ್ಷಾಮ ಸೃಷ್ಟಿಯಾಗಿದ್ದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಲಿ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಬೆಳೆದ ಬೆಳೆಗಳು ಕೈಗೆ ಸೇರದ ಅಸಹಾಯಕ ಪರಿಸ್ಥಿತಿಯಲ್ಲಿ ನಾಡಿನ ರೈತರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಧಾವಿಸದ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರರದ್ದು ಸರ್ಕಾರ ಕಲೆಕ್ಷನ್ ಸರ್ಕಾರವಾಗಿದೆ. ಬರ ನಿರ್ವಹಣೆಯಲ್ಲಿ ವಿಫಲರಾಗಿದ್ದಲ್ಲದೇ, ತೀವ್ರ ವಿದ್ಯುತ್ ಅಭಾವ ತಲೆದೋರಿದ್ದರೂ ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಾಗಿ ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಸುತ್ತಿಲ್ಲವೆಂಬುದಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಹರಿಹಾಯ್ದ ಅವರು ಕೇಂದ್ರ ಸರ್ಕಾರವು ಕಲ್ಲಿದ್ದಲು ನೀಡಲು ಸಿದ್ಧವಿದ್ದರೂ ಗೂಬೆ ಕೂಡಿಸುವ ಕೆಲಸ ಯಾಕೆ ಎಂದು ಪ್ರಶ್ನಿಸಿದರು.
ರಾಜ್ಯದ ಗುತ್ತಿಗೆದಾರರ ಮನೆಗಳಲ್ಲಿ ಐಟಿ ದಾಳಿಯಿಂದಾಗಿ ಬಹುಕೋಟಿ ನಗದು ಪತ್ತೆಯಾಗುತ್ತಿದ್ದು, ಇದೆಲ್ಲವೂ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ ಸರ್ಕಾರದ ಕಲೆಕ್ಷನ್ ಹಣವಾಗಿದೆ. ಐಟಿ ದಾಳಿ ಮಾಡಿ, ಬಹು ಕೋಟಿ ಹಣವನ್ನು ಗುತ್ತಿಗೆದಾರರ ಮನೆಯಲ್ಲಿ ಪತ್ತೆ ಮಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕ್ಷಿ ಕೇಳುತ್ತಿದ್ದಾರೆ. ಇದಕ್ಕಿಂತಲೂ ಸಾಕ್ಷಿ ಬೇಕಾ ಎಂದು ಅವರು ವ್ಯಂಗ್ಯವಾಡಿದರು.
ಬರ ನಿರ್ವಹಣೆ ವೈಫಲ್ಯ, ವಿದ್ಯುತ್ ಕ್ಷಾಮ ತಡೆಯುವಲ್ಲಿ ವಿಫಲವಾಗಿರುವುದು, ಗುತ್ತಿಗೆದಾರರ ಮನೆಗಳಲ್ಲಿ ಕೋಟಿ ಕೋಟಿಗಟ್ಟಲೇ ದುಡ್ಡಿನ ರಾಶಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಎಂಎಲ್‌ಸಿ ರವಿಕುಮಾರ ತಾಕೀತು ಮಾಡಿದರು.