ಸಿದ್ಧರಾಮಯ್ಯಗೆ ಕ್ಷೇತ್ರ ಸಿಗದಿರುವ ಹೀನಾಯ ಸ್ಥಿತಿ ಬರಬಾರದಿತ್ತು: ಕಟೀಲು ವ್ಯಂಗ್ಯ

ಕಟೀಲ್
Advertisement

ದಾವಣಗೆರೆ: ಕಾಂಗ್ರೆಸ್‌ನ ದೊಡ್ಡ ನಾಯಕನಾಗಿರುವ ಸಿದ್ದರಾಮಯ್ಯಗೆ ವಿಧಾನಸಭಾ ಚುನಾವಣೆಗೆ ಕ್ಷೇತ್ರಗಳೇ ಸಿಗುತ್ತಿಲ್ಲ. ಇಂತಹವರಿಗೆ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸೋಮವಾರ ಮಾ.೨೫ರ ಪ್ರಧಾನಿ ನರೇಂದ್ರ ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಯಾವುದೇ ಸೂಕ್ತ, ಸುರಕ್ಷಿತ ಕ್ಷೇತ್ರ ಸಿಗುತ್ತಿಲ್ಲ. ಇದು ಕಾಂಗ್ರೆಸ್ಸಿನ ಒಳ ಜಗಳ ಏನೆಂಬುದನ್ನು ತೋರಿಸುತ್ತದೆ ಎಂದು ಕುಟುಕಿದರು.
ಅಶ್ವಮೇಧ ಯಾಗದಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮಾ.೨೫ರಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮ ಹಾಗೂ ಐತಿಹಾಸಿಕ ಸಮಾವೇಶ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಹೃದಯ ಭಾಗವಾದ ದಾವಣಗೆರೆಯು ಬಿಜೆಪಿಗೆ ಅದೃಷ್ಟದ ನೆಲವೂ ಆಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಸುತ್ತಮುತ್ತಲಿನ ೮ ಜಿಲ್ಲೆಗಳ ಪ್ರಮುಖರನ್ನು ಕರೆಸಿ, ಸಮಾವೇಶದ ಪೂರ್ವ ಸಿದ್ಧತಾ ಸಭೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು. ದಾವಣಗೆರೆಯಲ್ಲಿ ಮಾ.೨೫ರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಪ್ರತ್ಯೇಕವಾಗಿಯೇನೂ ಇಲ್ಲ. ಜನರ ಮಧ್ಯದಿಂದಲೇ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಸಮಾವೇಶದ ವೇದಿಕೆಗೆ ಬರಲಿದ್ದಾರೆ. ಅಂತಹದ್ದೊಂದು ಆಲೋಚನೆಯನ್ನು ಮಾಡಿದ್ದೇವೆ ಎಂದು ಕಟೀಲು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.