ಸಿಬ್ಬಂದಿಗೆ ವಿಮಾನಯಾನ ಭಾಗ್ಯ ಒದಗಿಸಿದ ಖಾಸಗಿ ಸಂಸ್ಥೆ

ವಿಮಾನ
Advertisement

ಮಂಗಳೂರು: ಮೊನ್ನೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು ಚಪ್ಪಲಿ ಹಾಕುವವರು ಕೂಡಾ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು ಎಂದಿದ್ದರು, ಪ್ರಧಾನಿಯವರ ಈ ಮಾತಿನಂತೆ ಮಂಗಳೂರಿನ ಖಾಸಗಿ ಸಂಸ್ಥೆಯೊಂದು ತನ್ನ ಸ್ವಚ್ಛತಾ ಸಿಬ್ಬಂದಿ ಸಹಿತ 32 ಮಂದಿಯನ್ನು ವಿಮಾನದಲ್ಲಿ ಪುಣ್ಯ ಕ್ಷೇತ್ರಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ.
ಸಹಕಾರಿ ವಲಯದಲ್ಲಿ ತಂತ್ರಾಂಶ ಒದಗಿಸುವ ಸಂಸ್ಥೆ ಮಂಗಳೂರಿನ ಆಟೋಮೇಶನ್ ಕ್ಲೌಡ್ ಸೊಲ್ಯೂಶನ್ಸ್ 2000 ಗ್ರಾಹಕರ ಗುರಿ ಮುಟ್ಟಿದ ಸಂಭ್ರಮದ ಅಂಗವಾಗಿ ಆಯೋಜಿಸಿದ ಪ್ರವಾಸದಲ್ಲಿ ಮಹಿಳೆಯರು ಸಹಿತ ಒಟ್ಟು 32 ಮಂದಿಯನ್ನು ವಿಮಾನದಲ್ಲಿ ಮಂಗಳೂರಿಂದ ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ನಂದಿ ಹಿಲ್ಸ್, ಈಶ ಫೌಂಡೇಶನ್, ಕೆಲವು ಪುಣ್ಯಕ್ಷೇತ್ರಗಳಿಗೂ ತೆರಳಿದ್ದಾರೆ. ಈ ಪೈಕಿ 28 ಜನರಿಗೆ ಇದು ಮೊದಲ ವಿಮಾನ ಪ್ರಯಾಣ. ಕಚೇರಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಕಸ್ತೂರಿ ಅವರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಿದ್ದರು.
ಮೊದಲ ಸಲ ವಿಮಾನದಲ್ಲಿ ಪ್ರಯಾಣ ಮಾಡುವಾಗ ಸಂಸ್ಥೆಯ ಎಲ್ಲರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗಬೇಕೆಂಬ ಕನಸು ಇತ್ತು. ಅದನ್ನು ನನಸಾಗಿಸಿದ್ದೇವೆ’ ಎಂದು ಕಂಪನಿಯ ಆಡಳಿತ ನಿರ್ದೇಶಕ ಜಗದೀಶ್ ರಾಮ ಮತ್ತು ಚೇರ್ಮನ್ ಲೋಕೇಶ್ ಎನ್. ತಿಳಿಸಿದ್ದಾರೆ.