ಸೀಟ್ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಬಿಲ್ಲವ ಸಮುದಾಯಕ್ಕೆ ಅನ್ಯಾಯ

ಪ್ರಣವಾನಂದ ಸ್ವಾಮೀಜಿ
Advertisement

ಮಂಗಳೂರು: ಕಾಂಗ್ರೆಸ್ ಪಕ್ಷ ಈಗಾಗಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಲ್ಲವರಿಗೆ ಸೀಟು ಹಂಚಿಕೆ ವಿಚಾರದಲ್ಲಿ ಅನ್ಯಾಯ ಮಾಡಿದೆ. ಮುಂದಿನ ಪಟ್ಟಿಯಲ್ಲಾದರೂ ಬಿಲ್ಲವರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ಇದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಅವರು ಮಾ.೨೬ ರಂದು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ರಾಜ್ಯದಲ್ಲಿ ಬಿಲ್ಲವ ಸಮುದಾಯಕ್ಕೆ ಮೂರೂ ಪಕ್ಷಗಳು ತಲಾ ೧೦ ಸೀಟ್‌ಗಳನ್ನು ನೀಡಬೇಕು. ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಬಿಲ್ಲವ ಸಮುದಾಯಕ್ಕೆ ಅನ್ಯಾಯವಾಗಿದ್ದು, ಮುಂದೆ ಯಾವ ಪಕ್ಷಗಳಿಂದ ಈ ರೀತಿಯ ಅನ್ಯಾಯವಾದಲ್ಲಿ ಸಮುದಾಯ ಪರ್ಯಾಯ ಯೋಚನೆ ಮಾಡಲಿದೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸಮುದಾಯದ ಶೇ.೭೦-೮೦ ಮತಗಳಿರುವ ಕ್ಷೇತ್ರಗಳಲ್ಲಿ ಬಿಲ್ಲವ ಅಭ್ಯರ್ಥಿಗಳನ್ನು ಕಡೆಗಣಿಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಸೀಟ್ ಆಕಾಂಕ್ಷಿ ೧೦-೧೨ ಮಂದಿ ಬಿಲ್ಲವ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷಕ್ಕೆ ೨ ಲಕ್ಷ ರೂ. ನೀಡಿ ಅರ್ಜಿ ಹಾಕಿದ್ದರು. ಆದರೆ, ಅವರ ಯಾರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದು ಎಲ್ಲರಿಗೂ ನೋವು ತಂದಿದೆ. ಈ ಬಗ್ಗೆ ಅವರೊಂದಿಗೂ ಮಾತನಾಡಿ ಅವರ ಅಭಿಪ್ರಾಯ ಪಡೆದುಕೊಂಡು ಶೀಘ್ರದಲ್ಲೇ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ಮಾತನಾಡುತ್ತೇನೆ ಎಂದರು.
ಈ ಚುನಾವಣೆಯಲ್ಲಿ ಬಿಲ್ಲವ ಸಮುದಾಯದ ಒಂದೇ ಒಂದು ಮತವು ಬೇರೆ ರೀತಿ ಹೋಗದೇ ಸಮುದಾಯದ ಅಸ್ಮಿತೆ ಹಾಗೂ ಅಸ್ತಿತ್ವ ಉಳಿಸಲು ಬಳಕೆಯಾಗಬೇಕಾಗಿದೆ. ಕೈ, ಕಮಲ, ತೆನೆಹೊತ್ತ ಮಹಿಳೆ ಮೂರೂ ಮುಖ್ಯವಲ್ಲ. ಸಮುದಾಯ ಮಾತ್ರ ಮುಖ್ಯವೆನ್ನುವ ದೃಷ್ಟಿಯಲ್ಲಿ ಈ ಬಾರಿ ಚುನಾವಣೆ ಎದುರಿಸಬೇಕಾಗುತ್ತದೆ. ಮೂರು ಪಕ್ಷಗಳು ಬಿಲ್ಲವ ಸಮುದಾಯವನ್ನು ಕಡೆಗಣಿಸಿದ್ದಲ್ಲಿ ಆಯಾ ಪಕ್ಷಗಳು ತಮ್ಮ ಸೀಟ್‌ಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು. ಜಿತೇಂದ್ರ ಜಿ. ಸುವರ್ಣ, ಲೋಕನಾಥ ಪೂಜಾರಿ, ಸುರೇಶ್‌ಚಂದ್ರ ಕೋಟ್ಯಾನ್ ಇದ್ದರು.