ಸುಪ್ರೀಂ ತೀರ್ಪಿನ ವಿರುದ್ಧ ಕಾವೇರಿ ಹೋರಾಟಗಾರ ಆಕ್ರೋಶ

Advertisement

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂ ಸೆಕ್ ನೀರು ಬಿಡುವಂತೆ ಆದೇಶ ಮಾಡಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಮಂಡ್ಯ ಜಿಲ್ಲಾ ರೈತರ ರೈತರ ರಕ್ಷಣಾ ಸಮಿತಿ ರಸ್ತೆ ತಡೆದು ಪ್ರತಿಭಟಿಸಿದರು.
ನಗರದ ಸರ್ ಎಂ ವಿ ಪ್ರತಿಮೆ ಎದುರು ಸಮಿತಿ ಸದಸ್ಯರ ಜೊತೆಗೋಡಿ ಮೈ ಶುಗರ್ ಕಬ್ಬು ಬೆಳೆಗಾರರ ಸಂಘ, ನೀರು ಬಳಕೆದಾರರ ಸಂಘದ ಕಾರ್ಯಕರ್ತರು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು.


ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿರುವುದು ಅಘಾತಕಾರಿಯಾಗಿದೆ. ಜಲಾಶಯಗಳ ವಾಸ್ತವ ಪರಿಸ್ಥಿತಿ ಅರಿಯದೆ ನೀರು ಬಿಡಲು ಆದೇಶ ಮಾಡಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಹೇಳಿದರು.
ನ್ಯಾಯಾಲಯದ ತೀರ್ಪಿನಂತೆ 15 ದಿನಗಳ ಕಾಲ ನೀರು ಬಿಟ್ಟರೆ ಜಲಾಶಯ ಸಂಪೂರ್ಣ ಬರಿದಾಗಲಿವೆ,ಅನಂತರ ವಾಸ್ತವ ಸ್ಥಿತಿ ಅವಲೋಕಿಸಿದರೆ ಏನು ಪ್ರಯೋಜನ, ಕರ್ನಾಟಕ ಸರ್ಕಾರ ನ್ಯಾಯಾಲಯದಲ್ಲಿ ವಾಸ್ತವಂಶದ ವಾದ ಮಂಡನೆ ಮಾಡುವಲ್ಲಿ ವಿಫಲವಾಗಿದೆ, ಯಾವುದೇ ಕಾರಣಕ್ಕೂ ನ್ಯಾಯಾಲಯದ ಆದೇಶ ಪಾಲನೆ ಮಾಡಬಾರದು ಎಂದು ಒತ್ತಾಯಿಸಿದರು.


ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡದೆ ಉದಾಸೀನ ಮಾಡಿರುವುದು ಸರಿಯಲ್ಲ,ಒಕ್ಕೂಟ ವ್ಯವಸ್ಥೆಯಲ್ಲಿ ಎರಡು ರಾಜ್ಯಗಳ ನಡುವೆ ಸಮನ್ವಯತೆ ಸಾಧಿಸಿ ಸಂಕಷ್ಟ ಕಾಲದಲ್ಲಿ ಮಾತುಕತೆ ಮೂಲಕ ಇತ್ಯರ್ಥ ಪಡಿಸದೆ ಕರ್ನಾಟಕದ ರೈತರ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಈಗಲಾದರೂ ರೈತರ ಕಾಯಲು ಕೇಂದ್ರ ಸರ್ಕಾರ ಬದ್ಧವಾಗಬೇಕು ಎಂದು ಹೇಳಿದರು.
ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ,ಎಂಎಸ್ ಆತ್ಮಾನಂದ, ಕೆ.ಬೋರಯ್ಯ ,,ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ,ರೈತ ಸಂಘದ ಇಂಡವಾಳು ಚಂದ್ರಶೇಖರ್. ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಅಂಬುಜಮ್ಮ, ಕಬ್ಬು ಬೆಳೆಗಾರರ ಸಂಘದ ವೇಣುಗೋಪಾಲ್, ಹೆಮ್ಮಿಗೆ ಚಂದ್ರಶೇಖರ್ ನೇತೃತ್ವ ವಹಿಸಿದ್ದರು.