ಸುಳ್ಳು ಇತಿಹಾಸ ಸೃಷ್ಟಿಸಬೇಡಿ ಎಂದ ನಿರ್ಮಲಾನಂದಶ್ರೀ

ನಿರ್ಮಲಾನಂದಶ್ರೀ
Advertisement

ಮಂಡ್ಯ: ‘ಉರಿಗೌಡ ನಂಜೇಗೌಡ ವಿಚಾರವನ್ನು ಮುನ್ನೆಲೆಗೆ ತಂದು ಮಂಡ್ಯದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದ ಬಿಜೆಪಿ ನಾಯಕರು ಈಗ ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಏಕೆಂದರೆ ಒಕ್ಕಲಿಗ ಆರಾಧ್ಯ ದೈವ್ಯ ಎಂದೇ ಕರೆಸಿಕೊಳ್ಳುವ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಕೆಲವು ಬಿಜೆಪಿ ನಾಯಕರ ವಿರುದ್ಧ ಸಿಡಿಮಿಡಿಗೊಂಡು ಕಿಡಿಕಾರಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಉರಿಗೌಡ ನಂಜೇಗೌಡ ವಿಚಾರವನ್ನು ಮುನ್ನೆಲೆಗೆ ತಂದು, ಮಂಡ್ಯದಲ್ಲಿ ರಾಜಕಾರಣ ಮಾಡುವ ಭರದಲ್ಲಿ ಬಿಜೆಪಿ ಮುಖಂಡರು ಉರಿಗೌಡ ನಂಜೇಗೌಡ ಎಂಬುವವರು ಟಿಪ್ಪುವನ್ನು ಕೊಂದರು ಎಂದು ಬಿಂಬಿಸಲು ಪ್ರಯತ್ನ ನಡೆಸಿದ್ದರು. ಆದರೆ, ಇದಕ್ಕೆ ನಾಡಿನ ವಿಚಾರವಾದಿಗಳು ಹಾಗೂ ಪ್ರಗತಿಪರ ಮುಖಂಡರು ಹಾಗೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದಾದ ನಂತರ ಬಿಜೆಪಿ ಸಚಿವ ಮುನಿರತ್ನ, ಉರಿಗೌಡ, ನಂಜೇಗೌಡ ಕುರಿತು ಸಿನಿಮಾ ತಯಾರು ಮಾಡುವುದಾಗಿ, ಚಲನಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿ, ಮಂಡಳಿಯಲ್ಲಿ ಹೆಸರು ನೋಂದಣಿ ಮಾಡಿಸಿದ್ದರು.
ನಿರ್ಮಲಾನಂದನಾಥ ಸ್ವಾಮೀಜಿ ರಂಗ ಪ್ರವೇಶ
ಇಷ್ಟೆಲ್ಲಾ ನಡೆಯುವವರೆಗೆ ಸುಮ್ಮನಿದ್ದ ನಿರ್ಮಲಾನಂದಶ್ರೀ ಅವರು, ಸಚಿವ ಮುನಿರತ್ನರನ್ನು ಕರೆಸಿಕೊಂಡು ಮಾತುಕತೆ ನಡೆಸಿ, ಯಾವುದೇ ಕಾರಣಕ್ಕೂ ಚಿತ್ರ ನಿರ್ಮಾಣ ಮಾಡುವುದು ಬೇಡ ಎಂದು ತಾಕೀತು ಮಾಡಿ ಕಳಿಸಿದ್ದಾರೆ.
‘ಯಾವುದೇ ಒಂದು ಸಮುದಾಯದಲ್ಲಿ ಗೊಂದಲ ಉಂಟು ಮಾಡುವುದು ಸರಿಯಲ್ಲ. ಸಿ.ಟಿ. ರವಿ, ಅಶ್ವತ್ ನಾರಾಯಣ್ ಅನಗತ್ಯವಾಗಿ ಉರಿಗೌಡ ನಂಜೇಗೌಡರ ಬಗ್ಗೆ ಹೇಳಿಕೆ ನೀಡುವುದು ಬೇಡ. ಅವರು ಮೊದಲು ಇತಿಹಾಸವನ್ನು ಸರಿಯಾಗಿ ಓದಿಕೊಳ್ಳಬೇಕು. ನಾನು ರಾಜೇಗೌಡರ ಕೃತಿಯನ್ನು ಓದಿದ್ದೇನೆ. ಅವರು ಎಲ್ಲಿಯೂ ಟಿಪ್ಪುವಿನೊಂದಿಗೆ ಉರಿಗೌಡ, ನಂಜೇಗೌಡ ಹೆಸರನ್ನು ಪ್ರಸ್ತಾಪ ಮಾಡಿಲ್ಲ, ಹೀಗಿರುವಾಗ ಯಾವುದೇ ಸೂಕ್ತ ಆಧಾರಗಳಿಲ್ಲದೇ ಅನಗತ್ಯ ಗೊಂದಲ ಸೃಷ್ಟಿ ಮಾಡುವುದು ಬೇಡ’ ಎಂದು ನಿರ್ಮಲಾನಂದಶ್ರೀ ಬಿಜೆಪಿ ಮುಖಂಡರಿಗೆ ನೀತಿ ಪಾಠ ಹೇಳಿದ್ದಾರೆ.
ಚಿತ್ರಕಥೆ ಬರೆಯುವುದಿಲ್ಲ ಎಂದ ಅಶ್ವತ್ ನಾರಾಯಣ್
ಉರಿಗೌಡ ನಂಜೇಗೌಡ ಚಿತ್ರಕ್ಕೆ ನಾನು ಚಿತ್ರಕಥೆ ಬರೆಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ತಿಳಿಸಿದ್ದಾರೆ. ಅಲ್ಲದೇ ನಿರ್ಮಲಾನಂದಶ್ರೀ ಜೊತೆ ಮಾತುಕತೆ ನಡೆಸಿದ ನಂತರ ಸಚಿವ ಮುನಿರತ್ನ ಅವರು, ಉರಿಗೌಡ ನಂಜೇಗೌಡ ಚಿತ್ರ ನಿರ್ಮಾಣವನ್ನು ಕೈಬಿಟ್ಟಿದ್ದೇನೆ. ಉರಿಗೌಡ ನಂಜೇಗೌಡರ ಬಗ್ಗೆ ಕೆಲವು ಗೊಂದಲಗಳಿವೆ. ಹಾಗಾಗಿ ಚಿತ್ರ ನಿರ್ಮಾಣ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.