ಸುಳ್ಳು ನಂಬಿ ಕೆಡಬೇಡಿ, ಸಮಾಜ ಕೆಡಿಸಬೇಡಿ..

Advertisement

ಸಂವಹನ ಈಗ ಮೊದಲಿನಷ್ಟು ಕಷ್ಟಕರವಲ್ಲ ಎಂಥದ್ದೇ ಮಾಹಿತಿಯನ್ನು ಜಗತ್ತಿನ ಯಾವುದೇ ಮೂಲೆಗೆ ಕ್ಷಣಾರ್ಧದಲ್ಲಿ ತಲುಪಿಸುವ ಸಾಮಾಜಿಕ ಜಾಲತಾಣಗಳು ಉತ್ತಮವಾದುದನ್ನು ಮಾತ್ರ ತಲುಪಿಸುತ್ತಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಸಮಾಜದ ತಲ್ಲಣಕ್ಕೆ ಕಾರಣವಾಗುತ್ತಿವೆ. ಅನಗತ್ಯ ವಿಷಯಗಳನ್ನು ಹರಡುವ ವಿಷ ಗಾಳಿಯಂತೆ ಸಾಮಾಜಿಕ ಜಾಲತಾಣಗಳು ಕುಖ್ಯಾತಿಗೆ ಈಡಾಗುತ್ತಿರುವುದು ವಿಷಾದದ ಸಂಗತಿ. ಸುಳ್ಳು ಸುದ್ದಿಗಳ ಹರಡುವಿಕೆ, ದ್ವೇಷ ಸಾಧನೆ, ವ್ಯಕ್ತಿಗತ ತೇಜೋವಧೆಯಂತಹ ಕುಕೃತ್ಯಗಳಿಗೆ ಸೋಷಿಯಲ್ ಮೀಡಿಯಾಗಳು ಭೂಮಿಕೆಯಾಗುತ್ತಿವೆ ಎಂದು ಅಧ್ಯಯನವೊಂದು ತಿಳಿಸಿದೆ.
ಯುವ ಜನಾಂಗವಂತೂ ಸದಾ ಮೊಬೈಲ್ ಕೈಯಲ್ಲಿ ಹಿಡಿದು ಜೀವನದ ಪರಮಸತ್ಯವನ್ನು ಹಾಗೂ ಸುಖವನ್ನು ಮೊಬೈಲ್‌ನಲ್ಲಿಯೇ ಹುಡುಕಾಡುತ್ತಿರುವುದು ವಿಪರ್ಯಾಸವೇ ಸರಿ. ಜವಾಬ್ದಾರಿ ಇಲ್ಲದ ಹುಡುಗನೊಬ್ಬ ತನ್ನ ಮೊಬೈಲ್‌ನ ಸ್ಟೇಟಸ್‌ನಲ್ಲಿ ಮತ್ತೊಂದು ಧರ್ಮದ ಬಗೆಗೆ ಟೀಕೆ ಮಾಡಿದ ರೀತಿಯ ಬರಹವೊಂದನ್ನು ಹಾಕಿದ್ದಕ್ಕಾಗಿ ಊರಿಗೆ ಊರೇ ಪ್ರಕ್ಷಬ್ಧಗೊಂಡು ಪೊಲೀಸರು ವಾರಗಟ್ಟಲೇ ಹೆಣಗಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ವಿಷಯ ಇತ್ತೀಚೆಗೆ ಸುದ್ದಿಯಾಯ್ತು. ಸುಳ್ಳು ಸುದ್ದಿಗಳಿಗೆ, ಅಪಪ್ರಚಾರಗಳಿಗೆ ಆಯುಷ್ಯ ಕಡಿಮೆ ಆದರೆ ಅತೀ ಕಡಿಮೆ ವೇಳೆಯಲ್ಲಿ ಈ ಸುಳ್ಳು ಸಂದೇಶಗಳು ಸೃಷ್ಟಿಸುವ ಆವಾಂತರ ಕಡಿಮೆಯೇನಲ್ಲ. ವಾಸ್ತವ ಸಂಗತಿಯೆಂದರೆ ಸತ್ಯ ಮಾತ್ರ ದೀರ್ಘಕಾಲ ಉಳಿದು ಸಮಾಜದ ಶಾಂತಿ, ನೆಮ್ಮದಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಸಾವಿರಾರು ವರ್ಷಗಳ ಹಿಂದೆ ಮಹಾತ್ಮ ಬುದ್ಧರು ಸೇರಿದಂತೆ ಬಸವೇಶ್ವರರು, ಮಹಾವೀರರು, ಗುರುನಾನಕರು ಹೀಗೆ ಅನೇಕ ಮಹನೀಯರು ಹೇಳಿ ಹೋಗಿರುವ ಮಾತುಗಳು ಪ್ರಸ್ತುತಕ್ಕೂ ಜಗತ್ತಿನಾದ್ಯಂತ ಪಸರಿಸಿ ಆ ಮಹಾತ್ಮರ ಆದರ್ಶದ ನುಡಿಗಳು ಶಾಶ್ವತವಾಗಿ ಜನಮನದಲ್ಲಿ ಉಳಿದಿವೆ ಏಕೆಂದರೆ ಅವು ಸತ್ಯದ ನುಡಿಗಳು ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ವಿನಾಕಾರಣ ಹರಿಬಿಡುವ ಸುಳ್ಳುಗಳಾಗಿರಲಿಲ್ಲ.
ಸುಳ್ಳಿಗೆ ಸತ್ಯದ ಪೋಷಾಕು ತೊಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ ಅದರ ಆಯಸ್ಸು ಪೋಷಕು ಕಳಚುವತನಕವಷ್ಟೇ. ಸತ್ಯ ಎಂದಿಗೂ ಅಜರಾಮರ ಹೀಗಾಗಿ ಸತ್ಯವನ್ನೇ ನುಡಿಯೋಣ, ಸತ್ಯದ ಮಾರ್ಗದಲ್ಲಿಯೇ ಸಾಗೋಣ.