ಸುಳ್ಳು ಸುದ್ದಿಗಳೆಲ್ಲ ತೊಳೆದು ಹೋಗಲಿದೆ

ಪ್ರಿಯಾಂಕ ಖರ್ಗೆ
Advertisement

ಬೆಂಗಳೂರು: ಸುಳ್ಳು ಸುದ್ದಿಗಳೆಲ್ಲ ತೊಳೆದು ಹೋಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ಮೇಲೆ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಎಫ್​ಐಆರ್ ದಾಖಲಾದ ಹಿನ್ನಲೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, “ಬಿಜೆಪಿ ಕಾನೂನು ಸರಿಯಾಗಿ ಪಾಲನೆ ಆದಾಗಲೆಲ್ಲ ಅಳುತ್ತದೆ. ಅವರಿಗೆ ಈ ನೆಲದ ಕಾನೂನಿನ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ. ಮಾಳವೀಯ ಅವರ ಮೇಲೆ ದಾಖಲಾದ ಎಫ್​ಐಆರ್​​ನಲ್ಲಿ ಯಾವುದನ್ನು ಬದಲಾಯಿಸಲಾಗಿದೆ ಎಂಬುದನ್ನು ಬಿಜೆಪಿಯವರು ಹೇಳಲಿ. ಅವಹೇಳನಕಾರಿ ವಿಡಿಯೋವನ್ನು ಮಾಡಿದವರು ಯಾರು, ವಿಡಿಯೋವನ್ನು ಪ್ರಚಾರ ಮಾಡಿದವರು ಯಾರು, ಯಾರು ಈ ಸುಳ್ಳುಗಳನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಡಿದವರು. ಕರ್ನಾಟಕದ ಜನತೆಗೆ ನಾನು ಹೇಳುವುದೇನೆಂದರೆ ಈ ಸುಳ್ಳು ಸುದ್ದಿಗಳೆಲ್ಲ ತೊಳೆದು ಹೋಗಲಿದೆ. ನಾವು ಈ ಪ್ರಕರಣವನ್ನು ಕಾನೂನಾತ್ಮಕ ಸಲಹೆಯಿಂದಲೇ ದಾಖಲಿಸಿದ್ದೇವೆ. ನಾವು ಈ ಪ್ರಕರಣ ದಾಖಲು ಮಾಡಲು ವಾರಗಳನ್ನು ತೆಗೆದುಕೊಂಡು, ಸಲಹೆ ಪಡೆದ ನಂತರವೇ ಈ ಕೆಲಸ ಮಾಡಿದ್ದೇವೆ. ದಾಖಲಾದ ಸೆಕ್ಷನ್​ ಯಾವುದರಲ್ಲಿ ಉದ್ದೇಶ ಪೂರಿತವಾಗಿ ಕಾಣುತ್ತಿದೆ ಎಂಬುದನ್ನು ಜನರೇ ಹೇಳಲಿ” ಎಂದಿದ್ದಾರೆ.
ಏನಿದು ಪ್ರಕರಣ: ಜೂನ್ 17ರಂದು ಅಮಿತ್ ಮಾಳವಿಯಾ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಿಂದ ಅನಿಮೇಟೆಡ್ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಪೋಸ್ಟ್ ಹಾಗೂ ವಿಡಿಯೊ ಬಿತ್ತರಿಸುವ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತೇಜೋವಧೆ ಮಾಡಿರುವುದಾಗಿ ಆರೋಪಿಸಿ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ವಿರೋಧಿ ಹಿಂದೂ ಉಗ್ರವಾದ ಉದಯವನ್ನು ಬೆಂಬಲಿಸುತ್ತದೆ ಎಂದು ವಿಡಿಯೋದಲ್ಲಿ ಬಿಂಬಿಸಲಾಗಿದೆ. ಅಲ್ಲದೇ ಆಂತಕವಾದಿಗಳಿಗಿಂತಲೂ ರಾಹುಲ್ ಗಾಂಧಿ ಅಪಾಯಕಾರಿ ಎಂದು ಅಣಕಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ಅಮಿತ್‌ ಮಾಳವೀಯಾ ವಿರುದ್ಧ ಜೂನ್ 19ರಂದು ಕಾಂಗ್ರೆಸ್ ನಾಯಕರು ದೂರು ನೀಡಿದ್ದರು.