ಸೂಕ್ಷ್ಮತೆ ಮರೆತು ವಿಪಕ್ಷಕ್ಕೆ ಅಸ್ತ್ರ ಕೊಟ್ಟ ಆಡಳಿತ

Advertisement

ನಿಶ್ಯಸ್ತ್ರಧಾರಿ ಎದುರಾಳಿಗೆ ತಾನೇ ಶಸ್ತ್ರ ಕೊಟ್ಟು ದಾಳಿ ಮಾಡಿಸಿಕೊಂಡರು’ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆಯೇ.
ಸೂಕ್ಷ್ಮತೆ, ಸಂದರ್ಭ, ವಾಸ್ತವಿಕ ಸ್ಥಿತಿಗತಿ ಅರಿವಿಲ್ಲದಿದ್ದರೆ ಆಗುವುದು ಹೀಗೆಯೇ.
ಶ್ರೀಕಾಂತ ಪೂಜಾರಿ ಎಂಬಾತನನ್ನು ೧೯೯೨ರ ಗಲಭೆಗೆ ಸಂಬಂಧಿಸಿ ಈಗ ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ಅಂದಿನ ಗಲಭೆ ನಡೆದದ್ದು ಬಾಬರಿ ಮಸೀದಿ ಕರ ಸೇವೆಯ ಹಿಂದಿನ ದಿನ. ಅಂದು ಪ್ರತಿಭಟನೆ ಘರ್ಷಣೆಗೆ ತಿರುಗಿ, ಹಿಂಸಾರೂಪ ತಾಳಿ ಗೋಲಿಬಾರ್ ಕೂಡ ಆಗಿತ್ತು. ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ನೂರಾರು ಜನರ ಮೇಲೆ ಪ್ರಕರಣಗಳು ದಾಖಲಾಗಿದ್ದವು.
ಶಹರ ಠಾಣೆಯ ಪ್ರಕರಣವೊಂದರಲ್ಲಿ ಶ್ರೀಕಾಂತ ಪೂಜಾರಿ ಆರೋಪಿತ. ಆತ ಅಂದಿನಿಂದಲೂ ತಲೆ ಮರೆಸಿಕೊಂಡಿದ್ದ, ಈಗ ಸಿಕ್ಕಿದ್ದಾನೆ. ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎನ್ನುವುದು ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರದ ಈಗಿನ ಹೇಳಿಕೆ.
ಹಾಗೇ ಸಹಜವಾಗಿ ಇದ್ದಿದ್ದರೆ ವಿವಾದವಾಗುತ್ತಿರಲಿಲ್ಲ. ಆದರಿದು ರಾಮ ಮಂದಿರ ಉದ್ಘಾಟನೆ ಪೂರ್ವ ಸನ್ನಿವೇಶ. ಹೀಗಾಗಿ ಪೂಜಾರಿ ಬಂಧನ ಈಗ ರಾಷ್ಟçವ್ಯಾಪಿ ಆಕ್ರೋಶ, ಪ್ರತಿರೋಧಕ್ಕೆ ಕಾರಣವಾಗಿದೆ. ರಾಜಕೀಯ ಸೂಕ್ಷ್ಮತೆಗಳು, ಸಂಘರ್ಷಗಳು, ವಾದ ಪ್ರತಿದಾಳಿಗಳಿಗೆ ಆಸ್ಪದ ನೀಡಿದೆ.
ರಾಮ ಮಂದಿರ ಉದ್ಘಾಟನೆಯ ಈ ಸಂದರ್ಭದಲ್ಲಿಯೇ ಉದ್ದೇಶಪೂರ್ವಕವಾಗಿ ಶ್ರೀಕಾಂತ ಪೂಜಾರಿ ಬಂಧನವಾಗಿದೆ ಎನ್ನುವುದು, ಅದೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ `ತುಷ್ಟೀಕರಣ’ ಘಟನಾವಳಿಗಳ ಮುಂದುವರಿದ ಭಾಗವಿದು ಎನ್ನುವುದು ಆರೋಪ.
ಶ್ರೀಕಾಂತ ಪೂಜಾರಿ ಬಂಧನ ಈಗ ನೆಪವಷ್ಟೇ. ಇದೊಂದು ಅಸ್ತ್ರವನ್ನು ಸರ್ಕಾರದ ವಿರುದ್ಧ ಝಳಪಿಸಲು ಸರ್ಕಾರವೇ ಇದನ್ನು ನೀಡಿದಂತಾಯ್ತು. ಇದು ಯಾವ ಹಂತ ತಲುಪಲಿದೆ ಎನ್ನುವುದು ಕಾಣಬೇಕಷ್ಟೇ.
ಈ ಘಟನೆಯ ವಿವಿಧ ಮಗ್ಗಲುಗಳನ್ನು ತಿರುವಿದಾಗ ಸೂಕ್ಷ್ಮ ಸಂವೇದನೆ, ವಿವಾದದ ಮುನ್ಸೂಚನೆ, ಅನಗತ್ಯ ಸಂಘರ್ಷ, ರಾಜಕೀಯ ಅಸ್ತಿತ್ವ ಎಲ್ಲವುಗಳ ಒಳಹೂರಣ ಸ್ಪಷ್ಟವಾಗಿದೆ.
ನಿಜ. ಶ್ರೀಕಾಂತ ಪೂಜಾರಿ ಮೇಲೆ ೧೯೯೨ರಂದು ಎಫ್‌ಐಆರ್ ದಾಖಲಾಗಿದೆ. ಅಂದಿನಿಂದ ಪ್ರಕರಣ ಹಾಗೇ ಉಳಿದಿದೆ.
ರಾಜ್ಯದಲ್ಲಿ ತನಿಖೆ ನಡೆಯದ, ಇತ್ಯರ್ಥಗೊಳ್ಳದ ೧.೩೬ ಲಕ್ಷ ಪ್ರಕರಣಗಳಲ್ಲಿ ಇದೂ ಒಂದು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ, ಸರ್ಕಾರದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯ ನಂತರ ಹಳೇ ಪ್ರಕರಣಗಳ ತನಿಖೆ ಮತ್ತು ಇತ್ಯರ್ಥಗೊಳಿಸಲು ನೀಡಿರುವ ಸೂಚನೆ ಅನ್ವಯ, ಹುಬ್ಬಳ್ಳಿ ಶಹರ ಠಾಣೆಯ ೩೨ ಪ್ರಕರಣಗಳಲ್ಲಿ ಇದೂ ಒಂದು ಎನ್ನುವುದು ಈಗ ನೀಡಲಾಗುತ್ತಿರುವ ಸ್ಪಷ್ಟನೆ.
ವ್ಯವಸ್ಥೆ ಇಷ್ಟು ಪೇಲವ ಹಾಗೂ ಸಂವೇದನಾರಹಿತವಾಗಿದೆ ಎನ್ನುವುದಕ್ಕೆ ಶ್ರೀಕಾಂತ ಪೂಜಾರಿ ಬಂಧನ ಮತ್ತು ಘಟನಾವಳಿಗಳಿಂದ ತಿಳಿಯಬಹುದು. ಶ್ರೀಕಾಂತ ಪೂಜಾರಿ ಹುಬ್ಬಳ್ಳಿಯಲ್ಲಿಯೇ ಆಟೋ ಓಡಿಸುತ್ತಿರುವ ವ್ಯಕ್ತಿ. ಅಂದು ಆತನಿಗೆ ೩೦ ವರ್ಷ. ಈಗ ೬೨ ವರ್ಷ. ಆತ ನಾಪತ್ತೆಯಾಗಿದ್ದಾನೆ, ಈಗ ಸಿಕ್ಕಿದ್ದಾನೆ ಎನ್ನುವ ಪೊಲೀಸರು ೧೯೯೨ರಿಂದ ೨೦೧೩ರವರೆಗೆ ಆತನ ಮೇಲೆ ಹದಿನೈದು ಪ್ರಕರಣಗಳನ್ನು ದಾಖಲಿಸಿದ್ದಾರೆ!. ಅಕ್ರಮ ಸಾರಾಯಿ, ಮದ್ಯ ಮಾರಾಟ ಇತ್ಯಾದಿಗಳು ಇವುಗಳಲ್ಲಿ ಸೇರಿವೆ. ಆ ಎಲ್ಲ ಸಂದರ್ಭಗಳಲ್ಲೂ ಆತನನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಪ್ರಕರಣವೊಂದನ್ನು ಬಿಟ್ಟು.!! ಹಾಗಿದ್ದೂ ಆತ ತಲೆಮರೆಸಿಕೊಂಡ ಆರೋಪಿ ಹೇಗಾದ? ಇದೇ ೯೨ರ ಪ್ರಕರಣದಲ್ಲಿ ೧೫ ಜನ ಆರೋಪಿಗಳಿದ್ದಾರೆ. ಪ್ರಥಮ ಆರೋಪಿ ವಿಚಾರಣೆ ನಡೆದು ಖುಲಾಸೆಯಾಗಿದ್ದಾನೆ. ಮೂವರು ಅಸುನೀಗಿದ್ದಾರೆ. ವಾರದ ಹಿಂದಷ್ಟೇ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ನ್ಯಾಯಾಲಯ ಬಿಡುಗಡೆ ಮಾಡಿದೆ. ಆಗ ಹುಟ್ಟಿಕೊಳ್ಳದ ವಿವಾದ ಈಗ ಪೂಜಾರಿ ನೆಪದಲ್ಲಿ ಸಂಘರ್ಷಕ್ಕೆ ತಿರುಗಿದೆ. ಕೋಮು ವಿವಾದ, ತುಷ್ಟೀಕರಣ ಇತ್ಯಾದಿಗಳ ಪ್ರಶ್ನೆ ಎದ್ದಿದೆ.
ಶ್ರೀಕಾಂತ ಪೂಜಾರಿ ಬಂಧನ ಎಷ್ಟು ಸೂಕ್ಷö್ಮವಾಗಿದೆ ಎನ್ನುವುದನ್ನು ಪೊಲೀಸ್ ಇಲಾಖೆಗೆ ತಿಳಿದಿರಲಿಲ್ಲವೇ? ಅಥವಾ ಆತನ ಬಂಧನಕ್ಕೆ ಒತ್ತಡ ಇತ್ತೇ? ಈತ ಪಾಲ್ಗೊಂಡಿರುವುದು ಶ್ರೀರಾಮ ಜನ್ಮಭೂಮಿ ತೆರವಿಗೆ ಸಂಬಂಧಿಸಿದ ಘಟನೆಯಲ್ಲಿ. ಇಷ್ಟಿದ್ದೂ ರಾಮ ಮಂದಿರ ಉದ್ಘಾಟನೆ ನಿಯೋಜನೆಯಾದ ನಂತರ ವಿವಾದಕ್ಕೆ ತಿರುಗೀತು ಎನ್ನುವ ಸೂಕ್ಷ್ಮತೆ ಇಲ್ಲವೇ? ಅಥವಾ ತಿರುಗಲಿ ಬಿಡಿ ಎನ್ನುವ ಧೋರಣೆಯೋ? ಶಾಂತಿ ಕದಡಲಿ ಬಿಡಿ ಎನ್ನುವ ಇಚ್ಛೆಯೋ? ಇದರ ಪರಿಣಾಮದ ಅರಿವು ಇಲ್ಲವೇ ಎನ್ನುವ ಪ್ರಶ್ನೆಗಳು ಸಹಜ.
ಈ ಎಲ್ಲದರ ನಡುವೆ ಶ್ರೀಕಾಂತ ಪೂಜಾರಿ ಬಂಧನದ ಠಾಣಾಧಿಕಾರಿ ಅನ್ಯಕೋಮಿನವರಾಗಿರುವುದು, ಅವರಿಗೆ ರಾಜಕೀಯ ಬಲ ಇರುವುದು ಮತ್ತು ಇದೊಂದು ರಾಷ್ಟçವ್ಯಾಪಿ ಸಂಘರ್ಷದ ರಾಜಕೀಯಕ್ಕೆ ನಾಂದಿಯಾದೀತೆಂಬ ವ್ಯವಸ್ಥಿತ ಯೋಚನೆಯೋ? ಈಗ ಹೋರಾಟಗಾರರ ಬೇಡಿಕೆ ಠಾಣಾಧಿಕಾರಿ ಅಮಾನತು….
ಹುಬ್ಬಳ್ಳಿಯಲ್ಲಿ ಈದ್ಗಾ ವಿವಾದ, ರಾಮಜನ್ಮಭೂಮಿ ಕರಸೇವೆ, ಹತ್ತು ಹಲವು ಘರ್ಷಣೆಗಳಿಗೆ ಸಾಕ್ಷಿಯಾಗಿವೆ. ದಶಕಗಳ ಪರ್ಯಂತ ಕೋಮು ಗಲಭೆಗಳು ನಡೆದಿವೆ. ವಾಣಿಜ್ಯ ನಗರಿ ತನ್ನ ವ್ಯಾಪಾರ ವಹಿವಾಟನ್ನು ಕಳೆದುಕೊಂಡ ನಂತರ ಬುದ್ಧಿ ಕಲಿತಿದೆ. ಒಂದು ಈದ್ಗಾ ಮೈದಾನದ ಧ್ವಜಾರೋಹಣ ವಿವಾದ ಉತ್ತರ ಕರ್ನಾಟಕದಲ್ಲಿ ಕಮಲ ಅರಳಲು ಹೇಗೆ ಕಾರಣವಾಯಿತೋ ಹಾಗೇ ಅದನ್ನು ಆಗಾಗ ಬಳಸಿ ವಿವಾದವನ್ನು ಜೀವಂತವಾಗಿಟ್ಟುಕೊಳ್ಳುವ ವ್ಯವಸ್ಥಿತ ಕಾರ್ಯ ಕೂಡ ಇದೇ ನೆಲದಲ್ಲಿ ನಡೆದಿಲ್ಲವೇ…
ಹುಬ್ಬಳ್ಳಿ ಈದ್ಗಾ ಮೈದಾನದ ಸಂಘರ್ಷದಲ್ಲಿ ಪಾಲ್ಗೊಂಡ ಉಮಾಭಾರತಿ ತನ್ನ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳಬೇಕಾಯಿತು. ಇದೇ ಈದ್ಗಾ ವಿವಾದದಲ್ಲಿ ಯಡಿಯೂರಪ್ಪ, ಅನಂತಕುಮಾರ್, ಜೋಶಿ, ಕಾಟವೆ, ಈಶ್ವರಪ್ಪ, ಶಂಕರಮೂರ್ತಿ ಮೊದಲಾದವರ ಮೇಲೂ ಮೊಕದ್ದಮೆ ದಾಖಲಾಗಿತ್ತು. ಅಂದಿನ ಮೊಕದ್ದಮೆ ಹಲವು ವರ್ಷಗಳ ಕಾಲ ಅಸ್ತçವಾಗಿ ಸರ್ಕಾರದ ವಿರುದ್ಧ ಝಳಪಿಸಿ ಸಂಘರ್ಷಕ್ಕೆ ಇಳಿದದ್ದನ್ನು ಜನ ಮರೆತಿಲ್ಲ.
ಆಗ ಪ್ರಭಾವಿತರು ಪಾಲ್ಗೊಂಡ ಮೊಕದ್ದಮೆಗಳನ್ನೆಲ್ಲ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಜಾ ಆದವು. ಈ ಕರಸೇವಕರ ಮೇಲೆ ಹೂಡಿರುವ ಮೊಕದ್ದಮೆಯನ್ನೇಕೆ ಹಿಂಪಡೆಯಲಿಲ್ಲ? ಈಗ ಉತ್ತರ ಹೇಳಬೇಕು, ಸಂಘರ್ಷಕ್ಕೆ ಇಳಿದವರು!
ಹೋರಾಟಗಳೇ ಹೀಗೆ. ಹೋರಾಟಗಳಿಗೆ, ಘರ್ಷಣೆಗೆ ಜನರನ್ನು ಹುರಿದುಂಬಿಸಲಾಗುತ್ತದೆ. ಪ್ರಚೋದಿಸಲಾಗುತ್ತದೆ. ಆ ನಂತರ ಹೋರಾಟಗಳಲ್ಲಿ ಪಾಲ್ಗೊಂಡ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗುತ್ತದೆ ಎನ್ನುವ ಮಾತು ಈ ಶ್ರೀಕಾಂತ ಪೂಜಾರಿಗಳಿಗೂ ಹೀಗೆ ಅನ್ವಯವಾಗುತ್ತದೆ. ಪ್ರಮುಖರು ಇಂತಹ ಕಾರ್ಯಕರ್ತರನ್ನು, ಅವರ ಮೇಲೆ ಹೂಡಲಾಗಿರುವ ಮೊಕದ್ದಮೆಗಳ ಸಂಬಂಧ ಮುಂದೆ ಆಸಕ್ತಿಯನ್ನೇ ತಾಳುವುದಿಲ್ಲ. ಬಡಪಾಯಿಗಳು ನ್ಯಾಯಾಲಯಕ್ಕೆ ಅಲೆದಾಡಿ ಹೈರಾಣರಾಗುತ್ತಾರೆ..
ಈಗ ಕರಸೇವಕನ ಬಂಧನವಾಗಿದೆ ಎಂದು ಘರ್ಷಣೆಗೆ ಇಳಿದವರು ಅವರದ್ದೇ ಸರ್ಕಾರವಿದ್ದಾಗ ಇಂತಹ ಪ್ರಕರಣಗಳನ್ನೇಕೆ ಹಿಂಪಡೆಯಲಿಲ್ಲ? ತಮ್ಮ ಮೇಲಿರುವ ಮೊಕದ್ದಮೆಗಳನ್ನೇಕೆ ಹಿಂಪಡೆದರು? ಇದಕ್ಕೆ ಉತ್ತರವಿಲ್ಲ. ಬಹುಶಃ ಇಂತಹ ಸಂದರ್ಭಗಳು ಒದಗಬಹುದು ಎಂಬ ದೂರಾಲೋಚನೆ ಇರಲಿಕ್ಕಿಲ್ಲ. ಆದರೆ ಸರ್ಕಾರ ಅನಾಯಾಸವಾಗಿ ಹೊಸ ವಿವಾದವನ್ನು, ಸಂಘರ್ಷವನ್ನು ಕಮಲ ಪಡೆಗೆ ಬಟ್ಟಲಲ್ಲಿ ಹಾಕಿ ಕೊಟ್ಟಿತು. ಬರ, ಸಂಕಷ್ಟ, ವೈಫಲ್ಯಗಳನ್ನು ಮರೆಮಾಚಲು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ತಂತ್ರದ ಒಂದು ಭಾಗವೂ ಇದೇ ಇದ್ದೀತು..
ಏಕೋ ಏನೋ… ಸೂಕ್ಷ್ಮತೆ, ಸ್ಪಂದನೆರಹಿತ ಆಡಳಿತ ಪ್ರಕ್ರಿಯೆ ನಡೆಯುತ್ತಿರುವಂತೆ ಕಾಣುತ್ತದೆ. ಮಂತ್ರಿಗಳ ಅಸಹ್ಯಕರ ವರ್ತನೆ, ಹೇಳಿಕೆ, ನಡಾವಳಿಗಳೇ ಈಗ ಪ್ರತಿಪಕ್ಷಗಳಿಗೆ ಅಸ್ತ್ರವಾಗುತ್ತಿವೆ. ಜಮೀರ್ ಅಹಮದ್ ಸ್ಪೀಕರ್ ಕುರಿತು ಆಡಿದ ಮಾತು, ಶಿವಾನಂದ ಪಾಟೀಲರು ರೈತರ ಆತ್ಮಹತ್ಯೆ ಮತ್ತು ಬರಗಾಲ ಕುರಿತು ಹೇಳಿದ ನುಡಿ, ಸಂಪುಟದ ತೀರ್ಮಾನಗಳು ಎಲ್ಲವೂ ವಿಪಕ್ಷಗಳಿಗೆ ಬಟ್ಟಲಲ್ಲಿ ಶಸ್ತ್ರ ಕೊಟ್ಟು ಹೋರಾಡಿ ಎಂದು ಆಹ್ವಾನ ನೀಡಿದಂತಾಗಿದೆ.
ಶ್ರೀಕಾಂತ ಪೂಜಾರಿ ಬಂಧನ ಸಹಜ ಪ್ರಕ್ರಿಯೆ ಎಂದು ಸರ್ಕಾರ ಬಿಂಬಿಸಿದರೂ ಇದೊಂದು ತಾನೇ ಬಿಜೆಪಿ ಪಾಳಯಕ್ಕೆ ಬಳುವಳಿ ನೀಡಿದ ಕೊಡುಗೆ. ಇದರೊಟ್ಟಿಗೆ ಈಗ ಎದ್ದಿರುವ ಪ್ರಶ್ನೆ, ಇಷ್ಟು ಅಸೂಕ್ಷö್ಮತೆ ಆಡಳಿತ ಯಂತ್ರದಲ್ಲಿದೆಯೇ? ಅಥವಾ ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ಮಿಲಾಪಿಯೇ? ಎನ್ನುವುದು. ಗೊತ್ತಿಲ್ಲ. ಅಂತೂ ನಿಶ್ಯಕ್ತಿಯಿಂದ ಬಳಲುತ್ತಿದ್ದವರಿಗೆ ಹೊಸ ಹೊಸ ಟಾನಿಕ್‌ಗಳು ಲಭ್ಯವಾಗುತ್ತಿವೆ!!