ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಕುಮಟಾದಲ್ಲಿ ಸ್ಥಳ ಪರಿಶೀಲನೆ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
Advertisement

ಕುಮಟಾ: ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಬಲಗೊಂಡಂತೆ ರಾಜ್ಯದ ಆರೋಗ್ಯ ಸಚಿವರು ಉತ್ತರ ಕನ್ನಡದ ಶಾಸಕರೊಂದಿಗೆ ಮಂಗಳವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರೆ, ಅದೇ ಸಮಯದಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹಾಗೂ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈಸ್ ಡೀನ್ ಡಾ.ಜಯಪ್ರಕಾಶ ಶೆಟ್ಟಿ ಅವರ ತಂಡ ಇಲ್ಲಿನ ಐದು ಕಡೆ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ರೀತಿ ಜಿಲ್ಲಾಧಿಕಾರಿಗಳೊಂದಿಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಆಡಳಿತ ಮಂಡಳಿ ತಂಡ ಇಲ್ಲಿ ಸ್ಥಳ ಪರಿಶೀಲಿಸಿರುವುದನ್ನು ನೋಡಿದರೆ ಸರ್ಕಾರ `ಪಬ್ಲಿಕ್ ಆ್ಯಂಡ್ ಪ್ರೈವೇಟ್’ ಎಂಬ ತತ್ವದಡಿ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ. ಅದಕ್ಕೆ ಕೆ.ಎಸ್.ಹೆಗ್ದೆ ಆಸ್ಪತ್ರೆ ಆಡಳಿತ ಮಂಡಳಿ ಮುಂದೆ ಬಂದಿರುಬಹುದು ಎನ್ನಬಹುದಾಗಿದೆ.
ಜಿಲ್ಲಾಧಿಕಾರಿಗಳು, ಕುಮಟಾ ಉಪವಿಭಾಗಾಧಿಕಾರಿಗಳ ಮೂಲಕ ತಾಲೂಕಿನ ಮಿರ್ಜಾನ ಸಮೀಪದ ಎತ್ತಿನಬೈಲು, ಅಂತ್ರವಳ್ಳಿಯ ಶಿಳ್ಳೆ ಗುಡ್ಡ, ಕೊಂಕಣ ಎಜ್ಯುಕೇಶನ್ ಶಾಲೆಯ ಪಕ್ಕದಲ್ಲಿರುವ ಗುಡ್ಡ ಪ್ರದೇಶ ಹಾಗೂ ಪಟ್ಟಣದಲ್ಲಿರುವ ರೇಲ್ವೆ ಸ್ಟೇಶನ್ ಎದುರಿಗೆ ಹಾಗೂ ತೋಟಗಾರಿಕೆ ಇಲಾಖೆಯ ಹಿಂಬದಿ ಪ್ರದೇಶಗಳನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆ ಆಡಳಿತ ಮಂಡಳಿ ತಂಡಕ್ಕೆ ತೋರಿಸಿತು.