ಸೆ. 4ರಿಂದ ಹಾವೇರಿ ಜಿಲ್ಲೆಯಲ್ಲಿ ಮೋಡಬಿತ್ತನೆ

Advertisement

ರಾಣೇಬೆನ್ನೂರ: ಹಾವೇರಿ ಜಿಲ್ಲೆಯಲ್ಲಿ ಸೆ. ೪ರಿಂದ ಮೂರು ದಿನಗಳ ಕಾಲ ಮೋಡಬಿತ್ತನೆ ಮಾಡಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ನಮ್ಮ ಪಿಕೆಕೆ(ಪಕ್ಷಾತೀತ ಕಾಯಕದ ಕನಸು) ಸಂಸ್ಥೆಯ ವತಿಯಿಂದ ಈ ಮೋಡಬಿತ್ತನೆ ಮಾಡಲಾಗುತ್ತಿದ್ದು, ಸೆ. ೪ರಂದು ಮಧ್ಯಾಹ್ನ ೨ಕ್ಕೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಆರಂಭಿಸಲಾಗುವುದು. ವಿಮಾನ ಮೂರು ದಿನಗಳ ಕಾಲ ಸ್ಥಳೀಯವಾಗಿದ್ದು, ಎಲ್ಲೆಲ್ಲಿ ಮೋಡಬಿತ್ತನೆ ಮಾಡಲು ಮೋಡಗಳು ಸಿಗುತ್ತವೆಯೋ ಅಲ್ಲಲ್ಲಿ ಮೋಡಬಿತ್ತನೆ ಮಾಡಲಿದೆ. ಈ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹೆಚ್ಚಿನ ಮೋಡಗಳು ಸಿಗಲಿವೆ ಎನ್ನುವ ಮಾಹಿತಿಯಿದೆ. ಈಗಾಗಲೇ ಮೋಡಬಿತ್ತನೆ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಕೇಂದ್ರದಿಂದ ಪರವಾನಗಿ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮೋಡಬಿತ್ತನೆ ಚಾಲನೆ ಕಾರ್ಯಕ್ರಮಕ್ಕೆ ಸಚಿವ ಶಿವಾನಂದ ಪಾಟೀಲ, ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಸಂತೋಷ ಲಾಡ್, ಜಿಲ್ಲೆಯ ಎಲ್ಲ ತಾಲೂಕಿನ ಶಾಸಕರು ಹಾಗೂ ಧಾರವಾಡ ಜಿಲ್ಲೆಯ ಶಾಸಕರನ್ನು ಆಹ್ವಾನಿಸಲಾಗಿದೆ ಎಂದರು.
ಮೋಡಬಿತ್ತನೆ ಮಾಡುವ ವಿಮಾನದಲ್ಲಿ ನುರಿತ ಪೈಲೆಟ್ ಸೇರಿದಂತೆ ಒಟ್ಟು ೮ ಜನರ ತಂಡ ಕೆಲಸ ಮಾಡಲಿದೆ ಎಂದು ತಿಳಿಸಿದರು.