ಸೇಬು ಬರದ ನಾಡಿಗೂ ಸೈ

Apple
Advertisement

ಎಚ್.ಎ.ಸುರೇಂದ್ರಬಾಬು
ಕಾಶ್ಮೀರ, ಹಿಮಾಚಲಪ್ರದೇಶದ ಸಾಂಪ್ರದಾಯಿಕ ತೋಟಗಾರಿಕೆ ಬೆಳೆಯಾದ ಸೇಬು ಈಗ ಬರದ ನಾಡಿನಲ್ಲೂ ರಾರಾಜಿಸುತ್ತಿದೆ. ಹರಪನಹಳ್ಳಿ ತಾಲೂಕಿನ ಕುಂಚೂರುಕೆರೆ ತಾಂಡದ ರೈತ ಫಕೀರ ನಾಯಕ ಅವರು ಇಂಥದೊಂದು ಸಾಹಸ ಮಾಡಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
ಫಕೀರ ನಾಯಕ ಓದಿದ್ದು ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ. ಆದರೆ ಅನುಭವ ಹಾಗೂ ಜ್ಞಾನ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಫಕೀರ ನಾಯ್ಕ ಅವರು ಉದಾಹರಣೆಯಾಗಿ ನಿಲ್ಲುತ್ತಾರೆ. ೫ ಎಕರೆ ಕೃಷಿ ಭೂಮಿಯಲ್ಲಿ ಸಾವಯವ ಪದ್ಧತಿಯಲ್ಲಿ ಸೇಬು ಗಿಡ ನೆಟ್ಟು ಪ್ರಯೋಗ ಮಾಡಲು ಮುಂದಾಗಿದ್ದಾರೆ. ಸಸಿ ನೆಟ್ಟು ೧೧ ತಿಂಗಳಲ್ಲೇ ಸೇಬು ಫಲ ನೀಡಲು ಪ್ರಾರಂಭಿಸಿದೆ. ಬಿಸಿಲು ಹೆಚ್ಚಾಗಿರುವ ಪ್ರದೇಶ ಹರಪನಹಳ್ಳಿಯಂತಹ ತಾಲೂಕಿನಲ್ಲಿ ಸೇಬು ಬೆಳೆಯುವುದು ಸವಾಲೇ ಸರಿ. ಸವಾಲನ್ನು ಸ್ವೀಕರಿಸಿ ಯಶಸ್ವಿಯೂ ಆಗಿದ್ದು, ಸೇಬು ಬೆಳೆಯಲು ಸಾಧ್ಯವೇ ಇಲ್ಲ ಎಂದು ಮೂದಲಿಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ.

Apple

ನಿರ್ವಹಣೆ ಸರಳ
ಸೇಬು ನಿರ್ವಹಣೆ ವೆಚ್ಚವೂ ಕಡಿಮೆ. ನೀರಿನ ಬಳಕೆಯೂ ಕಡಿಮೆ. ಆರಂಭದಲ್ಲಿ ಎಕರೆಗೆ ೧.೫ ಲಕ್ಷ ರೂ. ಖರ್ಚಾಗುತ್ತದೆ. ಪ್ರತಿ ಗಿಡವೊಂದಕ್ಕೆ ೨೫೦ ರೂ., ನಾಟಿ ವೇಳೆ ಗಿಡದಿಂದ ಗಿಡಕ್ಕೆ ೮ ಅಡಿ ಅಂತರ, ಸಾಲಿನಿಂದ ಸಾಲಿಗೆ ೧೦ ಅಡಿ ಅಂತರ ಇರಬೇಕು. ೧೬ ತಿಂಗಳಿನಿಂದ ಫಲ ಆರಂಭವಾಗಿ ಪ್ರಥಮದರಲ್ಲಿ ೪ ರಿಂದ ೫ ಕೆ.ಜಿ ನಂತರದ ಫಲವಾಗಿ ೨೦ ರಿಂದ ೫೦ ಕೆ.ಜಿವರೆಗೂ ಬೆಳೆಯುತ್ತದೆ ಖರ್ಚು ಬಿಟ್ಟು ೧೫ ಲಕ್ಷದವರೆಗೂ ಲಾಭ ಗಳಿಸಬಹುದು. ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗಿಗಿಂತಲೂ ಶೀಘ್ರ ಇಳುವರಿ ಹಾಗೂ ಅಧಿಕ ಲಾಭದಾಯಕವಾಗಿದೆ. ನಮ್ಮ ಪರಿಸರದಲ್ಲಿ ಸಿಗುವ ಕಾಡು ಗಿಡಗಳಾದ ಬಿಕ್ಕೆ, ಕವಳೆ, ನೇರಳೆ, ಕಾರಿಹಣ್ಣಿನ ಗಿಡಗಳ ಬೇರಿನಿಂದ ಕಸಿ ಮಾಡಿದ ಸೇಬಿನ ಡೋರ್‌ಷಡ್, ಮೈಕಲ್, ಅಣ್ಣಾ ಗಿಡಗಳನ್ನು ೪೦ ಡಿಗ್ರಿ ಉಷ್ಣಾಂಶದಲ್ಲೂ ಬೆಳೆಸಬಹುದಾಗಿದೆ.
ಲಾಕ್‌ಡೌನ್ ಕಲಿಸಿದ ಪಾಠ
ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿಯೇ ಕಾಲಹರಣ ಮಾಡುವ ಪರಿಸ್ಥಿತಿ ಎದುರಾದಾಗ ವಾಣಿಜ್ಯ ಬೆಳೆಗಳ ಹುಡುಕಾಟವನ್ನು ಯುಟ್ಯೂಬ್‌ನಲ್ಲಿ ಆರಂಭಿಸಿದ್ದೆ. ಮಾಹಿತಿ ಲಭ್ಯವಾಗಿ ಸೇಬು ಬೆಳೆಯಲೇಬೆಕೆಂದು ಹಠಕ್ಕೆ ಬಿದ್ದೆ. ಚಿತ್ರದುರ್ಗದಲ್ಲಿ ೧.೫ ಎಕರೆ ಪ್ರದೇಶದಲ್ಲಿ ಜ್ಯೋತಿ ಪ್ರಕಾಶ್ ಎಂಬುವವರು ಬೆಳೆದ ಸೇಬಿನ ಕಥೆ ಕೇಳಿ ಬಂದೆ. ಮತ್ತಷ್ಟು ಹುಚ್ಚು ಹೆಚ್ಚಾಯಿತು. ಎಲ್ಲರೂ ಬೈದರು ಎಂಬುದನ್ನು ಬಿಟ್ಟರೆ ಸಹಕಾರ ನೀಡಲಿಲ್ಲ. ಆದರೆ ಗೆಳೆಯ ನಾಗರಾಜ್ ಪಾಟೀಲ್ ಮಾತ್ರ ಶಕ್ತಿ ಮೀರಿ ಸಹಾಯ ಮಾಡಿದರು. ಈ ಹಿಂದೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಂಡಿದ್ದೆ. ಸೇಬು ಬೆಳೆದು ಆರ್ಥಿಕ ಸದೃಢನಾಗುವ ನಂಬಿಕೆಯಿದೆ ಎಂದು ಫಕೀರ ನಾಯ್ಕ ಹೇಳುತ್ತಾರೆ.

ದಲ್ಲಾಳಿಗಳಿಂದ ದೂರ
ಸಿಮ್ಲಾ, ಕಾಶ್ಮೀರದಿಂದ ಬರುವ ಸೇಬು ದುಬಾರಿಯಾಗಿದ್ದು, ಕೊಳ್ಳಲಾಗದ ಬಡವರಿಗೆ ಕಡಿಮೆ ದರಕ್ಕೆ ಮಾರುವ ಆಲೋಚನೆ ಹೊಂದಿದ್ದೇನೆ. ಯಾವುದೇ ಕಾರಣಕ್ಕೂ ದಲ್ಲಾಳಿಗಳಿಗೆ ಮಾರದೇ ನೇರವಾಗಿ ಗ್ರಾಹಕರಿಗೆ ತಲುಪಿಸುವ ಗುರಿ ಹೊಂದಿದ್ದೇನೆ. ಮೂರು ಜಾತಿಯ ಸೇಬಿನ ಜೊತೆಯಲ್ಲಿ ಪೀಚು ಹಾಗೂ ಬದಾಮಿ ಗಿಡಗಳನ್ನು ಬೆಳೆಸುವ ಗುರಿ ಹೊಂದಿದ್ದೇನೆ. ಇಲಾಖೆಯಿಂದ ಯಾವುದೇ ಸಹಕಾರ ನೀಡಿಲ್ಲ. ಹನಿ ನೀರಾವರಿಗೂ ಸಹಾಯ ಸಿಗದು ಎಂದಿದ್ದಾರೆ. ಯಾವುದಕ್ಕೂ ಎದೆಗುಂದದೆ ಪ್ರಯತ್ನ ಮಾಡಿದ್ದೇನೆ. ಫಲ ನೀಡಿದರೆ ಉಳಿದ ರೈತರಿಗೆ ಮಾದರಿಯಾದೀತು ಎಂದು ಫಕ್ಕೀರ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಬಂಡವಾಳ ಹಾಕಿ ಕೈಸುಟ್ಟುಕೊಳ್ಳಬೇಡ ಎಂದು ನಾನೂ ಹೇಳಿದವನೇ. ಆದರೂ ಇವರ ಛಲವನ್ನು ನೋಡಿ ಸಾಥ್ ನೀಡಿದ್ದೇನೆ. ಹತ್ತಾರು ಕಡೆ ತಿರುಗಿ ಮಾಹಿತಿ ಪಡೆದು ಗಿಡಗಳನ್ನು ತರಿಸಿದ್ದೇವೆ. ರಾಸಾಯನಿಕ ಮುಕ್ತವಾಗಿ ಬೆಳೆಯಲು ಮುಂದಾಗಿದ್ದಾರೆ. ಶಾಸಕರಾಗಲಿ, ತೋಟಗಾರಿಕೆ ಅಧಿಕಾರಿಗಳಾಗಲಿ ಯಾರೂ ಸಹ ಸಹಕಾರಕ್ಕೆ ಬಂದಿಲ್ಲ. ಇಲ್ಲಿಯವರೆಗೆ ಒಂದು ರೂ. ಕೂಡ ಪ್ರೋತ್ಸಾಹ ಧನ ನೀಡಿಲ್ಲ. ಇನ್ನು ಮುಂದಾದರೂ ಅಧಿಕಾರಿಗಳು ರೈತರಿಗೆ ಸಹಕಾರ ನೀಡುವಂತಾಗಲಿ.
– ನಾಗರಾಜ್ ಪಾಟೀಲ್
ನೀಲಗುಂದ ಗ್ರಾಮದ ಪ್ರಗತಿಪರ ರೈತ

ಈ ನಮ್ಮ ಹವಾಮಾನಕ್ಕೆ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವಿಲ್ಲ ಎಂಬ ಕಾರಣದಿಂದ ನಾವು ಸ್ಥಳಕ್ಕೆ ಭೇಟಿ ನೀಡಿಲ್ಲ. ಕೃಷಿ ವಿಜ್ಞಾನಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿ ರೈತನಿಗೆ ಸೂಕ್ತ ಸಲಹೆ ಸೂಚನೆ ನೀಡುತ್ತೇವೆ
– ಆರ್. ಜಯಸಿಂಹ
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ