ಸೊಲಾಪುರ-ಗದಗ, ದಾದರ್-ಗದಗ ರೈಲು ಹೊಸಪೇಟೆವರೆಗೂ ವಿಸ್ತರಣೆ

Advertisement

ಹುಬ್ಬಳ್ಳಿ: ಸೊಲಾಪುರ-ಗದಗ (ರೈಲು ಸಂ. ೧೧೩೦೫/೩೦೬) ಹಾಗೂ ದಾದರ್-ಗದಗ ಎಕ್ಸ್‌ಪ್ರೆಸ್(ರೈಲು ಸಂ. ೧೧೧೩೯/೧೪೦) ರೈಲುಗಳು ಈಗ ಹೊಸಪೇಟೆವರೆಗೂ ಸಂಪರ್ಕಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಈ ಕುರಿತು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿಯವರು ಪ್ರಕಟಣೆ ನೀಡಿದ್ದು, ತಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಸ್ಪಂದಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಎರಡೂ ಎಕ್ಸ್‌ಪ್ರೆಸ್ ರೈಲುಗಳು ಈ ಮೊದಲು ಗದಗವರೆಗೂ ಮಾತ್ರ ಸಂಚರಿಸುತ್ತಿದ್ದವು. ವಿಜಯಪುರ, ಬಾಗಲಕೋಟೆ, ಗದಗ ವರೆಗೆ ಪ್ರಯಾಣಿಕರಿಗೆ ಅನುಕೂಲವಿತ್ತು. ಕೊಪ್ಪಳ ಹಾಗೂ ಹೊಸಪೇಟೆ ಭಾಗದ ಜನರು ಈ ರೈಲುಗಳ ಓಡಾಟವನ್ನು ಹೊಸಪೇಟೆವರೆಗೂ ವಿಸ್ತರಿಸಬೇಕೆಂಬ ಬೇಡಿಕೆ ಇಟ್ಟಿದ್ದರು. ಆ ಭಾಗದ ಶಾಸಕರು, ಸಂಸದರುಗಳ ಬೇಡಿಕೆಯನ್ವಯ ಕೇಂದ್ರ ಸಚಿವ ಜೋಶಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದರು. ಅದರ ಪರಿಣಾಮವಾಗಿ ಈಗ ರೈಲ್ವೆ ಮಂಡಳಿ ಈ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದ್ದು, ಈ ಭಾಗಗಳ ಜನತೆಯ ಬಹುದಿನಗಳ ಬೇಡಿಕೆ ಈಡೇರಿರುವುದು ಸಂತಸ ತಂದಿದೆ ಎಂದು ಜೋಶಿ ಹೇಳಿದ್ದಾರೆ. ಇಷ್ಟರಲ್ಲಿಯೇ ಈ ವಿಸ್ತರಣೆಯನ್ವಯ ಓಡಾಟ ಆರಂಭವಾಗಲಿದೆ ಎಂದೂ ಹೇಳಿದ್ದಾರೆ.