ಸೋಲಾರ್ ವಿಸ್ತರಣೆಗಿಂತ ಜಲ ಶಾಖೋತ್ಪನ್ನಕ್ಕೆ ಆದ್ಯತೆ ಇರಲಿ

Advertisement

ಸೋಲಾರ್ ವಿದ್ಯುತ್ ಉತ್ಪಾದನೆ ವಿಸ್ತರಣೆ ಉಪಯೋಗವಿಲ್ಲ. ಜಲ- ಶಾಖೋತ್ಪನ್ನ ವಿದ್ಯುತ್ ಸದ್ಯಕ್ಕೆ ನಮಗೆ ಪರಿಹಾರ ಕೊಡುತ್ತದೆ. ಸೋಲಾರ್ ಪಂಪ್‌ಸೆಟ್ ಸೂಕ್ತ.

ರಾಜ್ಯ ಸರ್ಕಾರ ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ೧೫ ಸಾವಿರ ಕೋಟಿ ರೂ. ಯೋಜನೆಗೆ ತೆಹ್ರಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ನಮ್ಮ ರಾಜ್ಯದ ವಿದ್ಯುತ್ ಕೊರತೆಗೆ ಇದು ಪರಿಹಾರವಲ್ಲ. ಸೋಲಾರ್ ವಿದ್ಯುತ್ ಉತ್ಪಾದನೆ ಗ್ಯಾರಂಟಿ ಇಲ್ಲ. ಜಲ ವಿದ್ಯುತ್ ಕೇಂದ್ರಗಳಲ್ಲಿ ನೀರಿನ ಪುನರ್‌ಬಳಕೆಗೆ ಪಂಪ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ. ಶರಾವತಿ, ಕದ್ರಾ, ಕೊಡಸಳ್ಳಿ ಜಲ ವಿದ್ಯುತ್ ಯೋಜನೆಗಳಿಗೆ ಇದನ್ನು ವಿಸ್ತರಿಸಿಕೊಳ್ಳುವುದು ಸೂಕ್ತ. ಅದೇರೀತಿ ರಾಯಚೂರು, ಬಳ್ಳಾರಿ ಮತ್ತು ಯರಮರಸ್‌ನಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಈಗಾಗಲೇ ಹಣ ಹೂಡಿಕೆ ಆಗಿದೆ. ಅದನ್ನು ನಿಲ್ಲಿಸಿ ಸೋಲಾರ್‌ಗೆ ಬಂಡವಾಳ ಹೂಡುವುದು ವಿವೇಕಯುತ ತೀರ್ಮಾನವಲ್ಲ. ಅಲ್ಲದೆ ಎನ್‌ಟಿಪಿಸಿ ವಿಜಯಪುರದ ಕೂಡಗಿಯಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾಪಿಸಿದೆ. ಅಲ್ಲಿ ೮೦೦ ಮೆಗಾವ್ಯಾಟ್ ಸಾಮರ್ಥ್ಯ ಇನ್ನೂ ಎರಡು ಘಟಕ ಸ್ಥಾಪಿಸಲು ಅವಕಾಶವಿದೆ. ಕೇಂದ್ರದೊಂದಿಗೆ ರಾಜ್ಯದ ಸಹಭಾಗಿತ್ಯದಲ್ಲಿ ಈ ಘಟಕಗಳನ್ನು ಸ್ಥಾಪಿಸಿ ವಿದ್ಯುತ್ ಪಡೆಯಬಹುದು. ಎನ್‌ಟಿಪಿಸಿಗೆ ಪ್ರತ್ಯೇಕ ಕಲ್ಲಿದ್ದಲು ಗಣಿ ಇದೆ.
ಸೋಲಾರ್ ವಿದ್ಯುತ್ ಘಟಕ ೩ ತಿಂಗಳಲ್ಲಿ ತಲೆಎತ್ತಲಿದೆ. ಅದರಿಂದ ವಿದ್ಯುತ್ ಬೆಳಗ್ಗೆ ಮಾತ್ರ ಲಭಿಸುತ್ತದೆ. ಸಂಜೆ ೬ ನಂತರ ಸಂಪೂರ್ಣ ಬಂದ್ ಆಗುತ್ತದೆ. ನಮಗೆ ರಾತ್ರಿ ವಿದ್ಯುತ್ ಪೂರೈಕೆ ಕಷ್ಟ. ೨೪ ಗಂಟೆ ನಿರಂತರ ವಿದ್ಯುತ್ ನೀಡುವ ಜಲ ಮತ್ತು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಬೇಕು. ಸೋಲಾರ್ ವಿದ್ಯುತ್ ಬ್ಯಾಟರಿಯಲ್ಲಿ ದಾಸ್ತಾನು ಮಾಡಿ ಬಳಸಬೇಕು ಎಂದರೆ ದುಬಾರಿಯಾಗುತ್ತದೆ.
ಇಂದಿನ ಪರಿಸ್ಥಿತಿಯಲ್ಲಿ ಕೆಲವು ವರ್ಷ ಭಾರತ ದೇಶ ಶಾಖೋತ್ಪನ್ನ ವಿದ್ಯುತ್ ಮೇಲೆ ಅವಲಂಬಿತ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ವಿಭಾಗವೇ ಹೇಳಿದೆ. ಕಡಿಮೆ ದರದಲ್ಲಿ ಸಿಗುವ ವಿದ್ಯುತ್ ಬಳಸುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯ. ಸೂರ್ಯ ಉಚಿತವಾಗಿ ಶಾಖ ನೀಡಿದರೂ ಸೋಲಾರ್ ವಿದ್ಯುತ್ ದುಬಾರಿಯೇ. ವಿದ್ಯುತ್ ರಂಗದಲ್ಲಿ ಬಂಡವಾಳ ಹೂಡಿಕೆ ಮಾಡುವಾಗ ಸರ್ಕಾರ ಎಚ್ಚರವಹಿಸಬೇಕು.
ತಂತ್ರಜ್ಞಾನ ಇನ್ನೂ ಪ್ರಯೋಗಾವಸ್ಥೆಯಲ್ಲಿರುವಾಗ ಅದರಲ್ಲಿ ಹೆಚ್ಚು ಬಂಡವಾಳ ಹೂಡುವುದು ಸರಿಯಲ್ಲ. ಸೋಲಾರ್ ಪಂಪ್‌ಸೆಟ್‌ನಲ್ಲಿ ಹಣ ತೊಡಗಿಸಿದರೆ ಅದರಿಂದ ರೈತರ ವಿದ್ಯುತ್ ಬವಣೆ ತಪ್ಪುತ್ತದೆ. ರೈತರು ೧೫ ವರ್ಷ ಸರ್ಕಾರದ ಕಡೆ ತಿರುಗಿ ನೋಡುವುದಿಲ್ಲ. ರಾಜ್ಯದಲ್ಲಿ ೩೧.೫ ಲಕ್ಷ ಪಂಪ್‌ಸೆಟ್‌ಗಳಿವೆ. ಇದಕ್ಕೆ ಶೇಕಡ ೪೩ ರಷ್ಟು ವಿದ್ಯುತ್ ಬಳಕೆಯಾಗುತ್ತಿದೆ. ಇದರಲ್ಲಿ ೫ ಅಶ್ವಶಕ್ತಿಯ ಪಂಪ್‌ಸೆಟ್‌ಗಳೇ ಹೆಚ್ಚು. ಸರ್ಕಾರ ಸೋಲಾರ್ ಪಂಪ್ ಉಚಿತವಾಗಿ ರೈತರಿಗೆ ನೀಡಬೇಕು. ಇದರಿಂದ ವಿದ್ಯುತ್ ಉಳಿತಾಯವಾಗುತ್ತದೆ. ರೈತರ ಸಮಸ್ಯೆಯೂ ಬಗೆಹರಿಯುತ್ತದೆ. ಈ ತಂತ್ರಜ್ಞಾನ ರಾಜಸ್ಥಾನದಲ್ಲಿ ಸಂಪೂರ್ಣವಾಗಿ ಬಳಕೆಯಾಗಿದೆ. ಅಲ್ಲೇ ಕೆಲಸ ಮಾಡಿ ಬಂದವರು ನಮ್ಮಲ್ಲೇ ಇದ್ದಾರೆ. ಅವರ ಅನುಭವವನ್ನು ಪಡೆಯಲು ನಮ್ಮ ಸರ್ಕಾರ ಮುಂದಾಗಿಲ್ಲ. ಸೋಲಾರ್ ಪಂಪ್‌ಸೆಟ್‌ನಿಂದ ವಿದ್ಯುತ್ ಮತ್ತು ನೀರು ಎರಡೂ ಉಳಿತಾಯವಾಗುತ್ತದೆ. ಇದನ್ನು ಬಿಟ್ಟು ಸೋಲಾರ್ ವಿದ್ಯುತ್ತನ್ನು ಜಾಲದ ಮೂಲಕ ನೀಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಸೋಲಾರ್ ಪಂಪ್‌ಸೆಟ್ ಡಿಸಿ ವಿದ್ಯುತ್ ಬಳಕೆಮಾಡಿಕೊಳ್ಳುತ್ತದೆ. ನಾವು ಬಳಸುವುದು ಎಸಿ ಕರೆಂಟ್. ವಿದ್ಯುತ್ ಜಾಲಕ್ಕೆ ಯಾವುದೇ ವಿದ್ಯುತ್ ಪ್ರಸರಣ ಮಾಡಿದರೂ ಶೇಕಡ ೧೫ ರಷ್ಟು ನಷ್ಟ ಇದ್ದೇ ಇರುತ್ತದೆ. ಸೋಲಾರ್ ಪಂಪ್‌ಸೆಟ್‌ನಲ್ಲಿ ಈ ನಷ್ಟ ಇರುವುದಿಲ್ಲ. ಈ ವಿಚಾರ ಅಧಿಕಾರಿಗಳಿಗೆ ತಿಳಿದಿಲ್ಲ ಎಂದರ್ಥವಲ್ಲ. ಅಧಿಕಾರದಲ್ಲಿರುವವರು ಕೇಳಿದರೆ ಅವರು ಸೂಕ್ತ ಸಲಹೆ ನೀಡುತ್ತಾರೆ. ಅಧಿಕಾರದಲ್ಲಿರುವವರು ಹಣದ ಕಡೆ ನೋಡಿದರೆ ಜನರ ಹಿತಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ.
ಸರ್ಕಾರ ವಿದ್ಯುತ್ ಕ್ಷೇತ್ರಕ್ಕೆ ೧ ಲಕ್ಷ ಕೋಟಿ ರೂ. ಸಹಾಯಧನ ನೀಡುತ್ತಿದೆ. ಇದರಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಹೆಚ್ಚಿನ ಹಣ ನೀಡಿದರೆ ಮುಂಬರುವ ದಿನಗಳಲ್ಲಿ ಸಹಾಯಧನ ಪ್ರಮಾಣ ಇಳಿಮುಖಗೊಳ್ಳುತ್ತದೆ. ನಮ್ಮಲ್ಲಿ ಜಲ ವಿದ್ಯುತ್ ಅತಿ ಕಡಿಮೆದರದಲ್ಲಿ ಲಭಿಸುತ್ತಿದೆ. ಜಲ ವಿದ್ಯುತ್ ದರ ಪ್ರತಿ ಯೂನಿಟ್ ದರ ೨ ರೂ. ಶಾಖೋತ್ಪನ್ನ ೩.೫೦ ರೂ. ಸೋಲಾರ್ ೯ ರೂ. ನೀಡುತ್ತಿದ್ದೇವೆ. ನಮ್ಮ ಬಜೆಟ್ ಮೇಲೆ ಹೆಚ್ಚಿನ ಭಾರ ಬೀಳದಂತೆ ನೋಡಿಕೊಳ್ಳುವುದು ಮುಖ್ಯ.