ಸೌಜನ್ಯ ಪ್ರಕರಣ: ಡಾ. ಹೆಗ್ಗಡೆ ವಿರುದ್ಧ ಅಪಪ್ರಚಾರ ಖಂಡಿಸಿ, ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Advertisement

ಮಂಗಳೂರು: ಧರ್ಮಸ್ಥಳ ಸಮೀಪದ ಪಾಂಗಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣದ ಮರು ತನಿಖೆ ನಡೆಸಿ ನೈಜ ಆರೋಪಿಯನ್ನು ಪತ್ತೆ ಹಚ್ಚಿ ಶಿಕ್ಷಿಸಲು ಹಕ್ಕೊತ್ತಾಯ ಮತ್ತು ಪ್ರಕರಣವನ್ನು ಮುಂದಿಟ್ಟು ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮೇಲೆ ವೃಥಾರೋಪಗಳಿಂದ ನೊಂದಿರುವ ಆಕ್ರೋಶಿತ ಬಂಧುಗಳು, ಭಕ್ತರು ಸೇರಿ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ ನೇತೃತ್ವದಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮುಂಭಾಗ ಇಂದು ಪ್ರತಿಭಟನಾ ಸಮಾವೇಶ ನಡೆಸಿದರು.
ನಂತರ ಉಜಿರೆ ಎಸ್.ಡಿ.ಎಂ. ಕಾಲೇಜು ಮುಂಭಾಗ ಹಕ್ಕೊತ್ತಾಯ ಸಭೆ ನಡೆಯಿತು. ಈ ವೇಳೆ ಸೌಜನ್ಯ ಅವರ ತಾಯಿ ಕುಸುಮಾವತಿ ಹಾಗೂ ತಂಗಿಯರು ಸಭೆಯಲ್ಲಿ ಭಾಗಿಯಾದರು. ಪ್ರಕರಣ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅವಹೇಳನ ವಿರುದ್ಧ ನಡೆದ ಪ್ರತಿಭಟನಾ ಸಮಾವೇಶಕ್ಕೆ ರಾಜ್ಯದ ವಿವಿಧ ಭಾಗದ ಭಕ್ತರು ಆಗಮಿಸಿ ಮಳೆಯ ಮಧ್ಯೆಯೇ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜೈಕಾರ ಕೂಗುತ್ತ ಸೌಜನ್ಯಳಿಗೆ ನ್ಯಾಯ ಒದಗಿಸಬೇಕೆಂದು ಹೋರಾಟ ನಡೆಸಿದರು.
ಇದೇ ವೇಳೆ ಸಮಾವೇಶದ ಹಕ್ಕೊತ್ತಾಯ ವೇದಿಕೆ ಸಮೀಪ ಸೌಜನ್ಯ ಅವರ ತಾಯಿ ಕುಸುಮಾವತಿ, ತಂಗಿಯರಾದ ಸೌಮ್ಯ, ಸೌಂದರ್ಯ, ಸೌಹಾರ್ದ, ತಮ್ಮ ಜಯರಾಮ ಹಾಗೂ ಅತ್ತೆ ಮಗಳು ಮಧುಶ್ರೀ ಸೌಜನ್ಯ ಫೋಟೋ ಹಿಡಿದು ಬಂದರು.
ಸೌಜನ್ಯ ಹಾಗೂ ತಾಯಿಯರನ್ನು ಕಂಡು ಭಕ್ತರು ಘೋಷಣೆ ಕೂಗಿದರು. ಕ್ಷೇತ್ರದ ಪರ ಅಪಪ್ರಚಾರ ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಘೋಷಣೆ ಕೇಳಿಬಂತು. ಈ ವೇಳೆ ಸೌಜನ್ಯ ತಾಯಿ ವೇದಿಕೆ ಏರಲು ಅವಕಾಶ ಕಲ್ಪಿಸುವಂತೆ ಕೇಳಿಕೊಂಡರು, ಸಾವಿರಾರು ಮಂದಿ ಸೇರಿರುವುದರಿಂದ ಪರಿಸ್ಥಿತಿ ಹದಗೆಡಬಾರದೆಂದು ಪೊಲೀಸರು ತಕ್ಷಣ ಅವರ ಕುಟುಂಬಕ್ಕೆ ಭದ್ರತೆ ನೀಡಿದರು. ಬಳಿಕ ಅಲ್ಲಿಂದ ಸೌಜನ್ಯ ಕುಟುಂಬವನ್ನು ಸ್ಥಳದಿಂದ ಕಳುಹಿಸುವ ವ್ಯವಸ್ಥೆ ಕಲ್ಪಿಸಿದರು. ಈ ಸಂದರ್ಭ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೌಜನ್ಯ ತಾಯಿ ಕುಸುಮಾವತಿ, ನನ್ನ ಕುಟುಂಬ ಧರ್ಮಸ್ಥಳದ ವಿರುದ್ಧ ಇಲ್ಲ. ಸೌಜನ್ಯ ಹತ್ಯೆಗೈದ ಆರೋಪಿಗಳನ್ನು ಬಂಧಿಸಬೇಕು. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದರು. ಶಾಸಕರಾದ ಹರೀಶ್ ಪೂಂಜ, ಹರೀಶ್ ಕುಮಾರ್, ಪ್ರತಾಪಸಿಂಹ ನಾಯ್ಕ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಜಯರಾಜ್ ಹೊಸಕೋಟೆ, ಮೂಡಬಿದ್ರೆಯ ವಕೀಲೆ ಶ್ವೇತಾ ಜೈನ್, ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿದರು.ಶಾರದಾ ಆರ್. ರೈ ಸ್ವಾಗತಿಸಿದರು.