ಸ್ಮಾರ್ಟ ಸಿಟಿ ಕಾಮಗಾರಿಗಳ ಬಗ್ಗೆ ಅಸಮಾಧಾನ

Advertisement

ಬೆಳಗಾವಿ: ಹಲವು ವರ್ಷಗಳ‌ ನಂತರ ನಡೆದ ಮೊದಲ ಪಾಲಿಕೆಯ ಪರಿಷತ್ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದವರು ಒಂದಾಗಿ ಕರ್ತವ್ಯಲೋಪ ಎಸಗುವ ಅಧಿಕಾರಿಗಳ ಬೆಂಡೆತ್ತುವ ಕೆಲಸ ಮಾಡಿದರು.
ಅಷ್ಟೇ ಅಲ್ಲ ಕಳೆದ ಮೂರು ವರ್ಷದಿಂದ ಒಂದೇ ಕಡೆಗೆ ಇರುವ ಅಧಿಕಾರಿಗಳನ್ನು ಬೇರೆಡೆ ವರ್ಗ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಭೆ ನಿರ್ಧರಿಸಿತು.
ಈ ಹಿನ್ನೆಲೆಯಲ್ಲಿ ಮೂರು ದಿನಗಳೊಳಗಾಗಿ ಅಂತಹ ಅಧಿಕಾರಿಗಳ ಪಟ್ಟಿ ಮಾಡಿ ಸರ್ಕಾರಕ್ಕೆ ಕಳಿಸಿಕೊಡಲು ಮೇಯರ್ ಸೂಚನೆ ನೀಡಿದರು. ಇದರ ಜೊತೆಗೆ ಸ್ಮಾರ್ಟ ಸಿಟಿ ಕಾಮಗಾರಿಗಳ ಬಗ್ಗೆ ಕೂಡ ನಗರಸೇವಕರು ಗರಂ ಆದರು.


ರವಿ ಧೋತ್ರೆ, ವಾಣಿ ಜೋಶಿ. ನಿತಿನ್ ಜಾಧವ, ಗಿರೀಶ್ ಧೋಂಗಡಿ, ಮಂಗೇಶ ಪವಾರ್ ಸೇರಿದಂತೆ ಮತ್ತಿತರರು ಸ್ಮಾರ್ಟ ಸಿಟಿ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸ್ಮಾರ್ಟ್ ಸಿಟಿಯ ಯಾವುದೇ ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಳ್ಳುವ ಮುನ್ನ ಥರ್ಡ ಪಾರ್ಟಿ ಇನ್ಸಪೆಕ್ಷನ್ ಮಾಡಿಸಬೇಕು. ‌ಈ ಸಂದರ್ಭದಲ್ಲಿ ಆಯಾ ನಗರಸೇವಕರ ಅಭಿಪ್ರಾಯವನ್ನು ಆಲಿಸಬೇಕು ಎಂದು ವಾಣಿ ವಿಲಾಸ ಜೋಶಿ ಹೇಳಿದರು. ವಾಣಿ ಜೋಶಿ‌ ಅವರ ಮಾತಿಗೆ ನಿತಿನ್ ಜಾಧವ, ರವಿ ಧೋತ್ರೆ ಅವರೂ ಸಹ ಸಹಮತ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಚಕ್ರವರ್ತಿ ಎಂಬ ಗುತ್ತಿಗೆದಾರನೊಬ್ಬ‌ ನಗರ ಸೇವಕ‌ ನಿತಿನ್ ಜಾಧವ ಅವರ‌ ಬಗ್ಗೆ‌ ಆಡಿದ ಮಾತು ಎಲ್ಲ ನಗರಸೇವಕರ ಪಿತ್ತ ನೆತ್ತಿಗೇರುವಂತೆ ಮಾಡಿತು.