ಸ್ವಾತಂತ್ರ್ಯ ಮತ್ತು ಶಿಸ್ತು

Advertisement

ಸ್ವಾತಂತ್ರ್ಯ ಮತ್ತು ಶಿಸ್ತು ವಿರುದ್ಧವಾದವು, ಆದರೂ ಅವು ಒಂದಕ್ಕೊಂದು ಪೂರಕವಾಗಿವೆ. ನಿಜವಾದ ಸ್ವಾತಂತ್ರ್ಯ ಶಿಸ್ತನ್ನು ಸನ್ಮಾನಿಸುತ್ತದೆ. ಶಿಸ್ತಿನಿಂದ ನಿಮಗೆ ಸ್ವಾತಂತ್ರ್ಯ ಸಿಗುತ್ತದೆ. ಉದಾಹರಣೆಗೆ, ಹಲ್ಲನ್ನು ಉಜ್ಜುವ ಶಿಸ್ತಿನಿಂದಾಗಿ ನಿಮಗೆ ದಂತದ ಸಮಸ್ಯೆಗಳಿಂದ ಸ್ವಾತಂತ್ರ್ಯ ಸಿಗುತ್ತದೆ. ವ್ಯಾಯಾಮದ ಶಿಸ್ತಿನಿಂದ ನೀವು ದೃಢಕಾಯರಾಗಿರುತ್ತೀರಿ.
ಶಿಸ್ತು ಒಂದು ಬೇಲಿಯಂತೆ. ಈ ಬೇಲಿಯೊಳಗೆ ಇರುವ ಸ್ವಾತಂತ್ರ್ಯವೆಂಬ ತೋಟದ ಪೋಷಣೆಯಾಗುತ್ತದೆ. ಶಿಸ್ತು ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ. ರಕ್ಷಣೆಯ ಉದ್ದೇಶ ಸ್ವಾತಂತ್ರ್ಯವನ್ನು ರಕ್ಷಿಸುವುದು. ಆದರೆ ರಕ್ಷಣಾಪಡೆಗಳಲ್ಲಿ ಸ್ವಾತಂತ್ರ್ಯವಿದೆಯೆ? ಸೈನಿಕರಿಗೆ ಸ್ವಾತಂತ್ರ್ಯವಿದೆಯೆ? ಇಲ್ಲ. ಅವರು ಬಂಧಿತರು. ಎಡಪಾದವನ್ನು ಇಡಬೇಕು ಎಂದಾಗ ಅವರ ಬಲಪಾದವನ್ನು ಇಡುವ ಸ್ವಾತಂತ್ರ್ಯ ಅವರಿಗಿಲ್ಲ. ಅವರ ಹೆಜ್ಜೆಗಳನ್ನು ಅಳೆಯಲಾಗುತ್ತದೆ. ಸಹಜವಾದ ಲಯದೊಡನೆ ಅವರಿಗೆ ನಡೆಯಲೂ ಸಾಧ್ಯವಿಲ್ಲ. ರಕ್ಷಣಾ ಪಡೆಗಳಲ್ಲಿ ಸ್ವಾತಂತ್ರ್ಯವೇ ಇಲ್ಲ, ಆದರೆ ನಮ್ಮ ದೇಶದ ಸ್ವಾತಂತ್ರ್ಯವನ್ನು ರಕ್ಷಿಸುವುದೇ ಇದು !
ಶಿಸ್ತಿಲ್ಲದ ಸ್ವಾತಂತ್ರ್ಯವು ರಕ್ಷಣೆಯಿಲ್ಲದ ದೇಶದಂತೆ. ಅವೆರಡೂ ಜೊತೆ ಜೊತೆಯಾಗೇ ನಡೆಯುತ್ತವೆ. ಇದನ್ನು ತಿಳಿದು ಜೀವನದಲ್ಲಿ ಮುನ್ನಡೆಯಿರಿ. ನಿಮಗೆ ಸ್ವಾತಂತ್ರ್ಯವನ್ನು ನೀಡುವಂತಹ ಕೆಲವು ನಿರ್ಬಂಧನೆಗಳಿರುತ್ತವೆ. ಸ್ವಾತಂತ್ರ್ಯದ ಮೇಲಾದರೂ ನಿಮ್ಮ ಗಮನವನ್ನಿಡಬಹುದು ಅಥವಾ ಶಿಸ್ತಿನ ಮೇಲಾದರೂ ನಿಮ್ಮ ಗಮನವನ್ನಿಡಬಹುದು ಮತ್ತು
ಸಂತೋಷವಾಗಿರಬಹುದು ಅಥವಾ ದುಃಖದಿಂದ ಇರಬಹುದು. ಬೇಲಿಗಳಿಗೆ ನಿರ್ದಿಷ್ಟವಾದ ಸ್ಥಾನ ಮತ್ತು ಉದ್ದೇಶವಿದೆ. ನಿಮ್ಮ ಆಸ್ತಿಯ ಎಲ್ಲೆಡೆಯೂ ಕೇವಲ ಬೇಲಿಯನ್ನೇ ಕಟ್ಟಿದ್ದರೆ, ನಿಮ್ಮ ಮನೆಯನ್ನು ಎಲ್ಲಿ ಕಟ್ಟುತ್ತೀರಿ? ಅದೇ ಸಮಯದಲ್ಲಿ, ಸರಿಯಾದ ಸ್ಥಾನದಲ್ಲಿ ಇರಿಸಲಾದ ಬೇಲಿಯು ಆಸ್ತಿಯನ್ನು ರಕ್ಷಿಸುತ್ತದೆ. ಪ್ರೇಮವು ನಿಮ್ಮನ್ನು ಹಾದಿಯಲ್ಲಿರಿಸುತ್ತದೆ. ಭಯವೂ ಸಹ ನಿಮ್ಮನ್ನು ಹಾದಿಯಲ್ಲಿರಿಸುತ್ತದೆ. ಅನೇಕ ಧರ್ಮಗಳು ಭಯವನ್ನೇ ತಮ್ಮ ಪ್ರಮುಖ ಸ್ಫೂರ್ತಿದಾಯಕ ಶಕ್ತಿಯನ್ನಾಗಿ ಮಾಡಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಕೃತಿಯೂ ಸಹ ಮಗುವಿನಲ್ಲಿ, ಒಂದು ನಿರ್ದಿಷ್ಟವಾದ ವಯಸ್ಸಿನಲ್ಲಿ ಭಯ ಹುಟ್ಟಿಸುತ್ತದೆ. ಪುಟ್ಟ ಮಗುವಿಗೆ ಭಯವಿರುವುದಿಲ್ಲ. ತಾಯಿಯಿಂದ ೧೦೦% ಪ್ರೇಮ ಮತ್ತು ಗಮನ ಸಿಗುತ್ತದೆ. ಆದರೆ ಮಗುವು ಸ್ವತಂತ್ರವಾಗಲು ಆರಂಭಿಸಿದೊಡನೆಯೇ ಪ್ರಕೃತಿಯು ಎಳ್ಳಷ್ಟು ಭಯವನ್ನು ಮಗುವಿನಲ್ಲಿ ಹುಟ್ಟಿಸುತ್ತದೆ. ಜಾಗೃತವಾಗಿರುವುದನ್ನು ಮಗುವು ಕಲಿಯಲು ಆರಂಭಿಸುತ್ತದೆ. ಸ್ವಾತಂತ್ರ್ಯ ಹೆಚ್ಚುತ್ತಿದ್ದಂತೆ ಮಗುವು ಎಚ್ಚರದಿಂದ ನಡೆಯುವುದನ್ನು ಕಲಿಯುತ್ತದೆ.
ಪರಿಪೂರ್ಣ ಸ್ವಾತಂತ್ರ್ಯ ಪರಿಪೂರ್ಣ ಆನಂದದ ಸ್ಥಿತಿಯೊಂದಿದೆ. ಅದ್ವೈತವು ಹೇಳುವಂತಹ ಸ್ವಾತಂತ್ರ್ಯ ಮನಸ್ಸಿನಲ್ಲಿ ಸ್ವಾತಂತ್ರ್ಯವಿರಬೇಕು, ಹೃದಯದಲ್ಲಿ ಪ್ರೇಮವಿರಬೇಕು ಮತ್ತು ಕೃತ್ಯದಲ್ಲಿ ಶಿಸ್ತಿರಬೇಕು. ಸ್ವಾತಂತ್ರ್ಯ ಕಳೆದುಕೊಳ್ಳುವ ಭೀತಿಯು ಶಿಸ್ತು ಮತ್ತು ರಕ್ಷಣೆಯನ್ನು ತರುತ್ತದೆ. ರಕ್ಷಣೆಯ ಉದ್ದೇಶ ಭಯವನ್ನು ನಿರ್ಮೂಲನಗೊಳಿಸುವುದು. ಆಧ್ಯಾತ್ಮಿಕ ಪಥದಲ್ಲಿ ಜ್ಞಾನವು ನಿಮ್ಮ ಸ್ವಾತಂತ್ರ್ಯವೂ ಹೌದು ಮತ್ತು ನಿಮ್ಮ ರಕ್ಷಣೆಯೂ ಹೌದು.