ಸ್ವಾಮಿನಾಥನ್ ಕೊಡುಗೆ ಎಲ್ಲರಿಗೂ ಸ್ಫೂರ್ತಿ

Advertisement

ಕೃಷಿ ವಿಜ್ಞಾನದಲ್ಲಿ ಕ್ರಾಂತಿ ತಂದ ದಾರ್ಶನಿಕ ಎಂ.ಎಸ್. ಸ್ವಾಮಿನಾಥನ್ ಅವರು ದೇಶಕ್ಕೆ ನೀಡಿದ ಕೊಡುಗೆಯು ಸುವರ್ಣಾಕ್ಷರಗಳಲ್ಲಿ ಅಚ್ಚಳಿಯದೆ ಸದಾ ಅಜರಾಮರವಾಗಲಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಲೂ ಅವರ ಒಡನಾಟ ಮುಂದುವರಿಯಿತು. ನಾನು ಅವರನ್ನು ೨೦೧೬ರಲ್ಲಿ ಅಂತರರಾಷ್ಟ್ರೀಯ ಕೃಷಿ-ಜೀವವೈವಿಧ್ಯ ಕಾಂಗ್ರೆಸ್‌ನಲ್ಲಿ ಭೇಟಿಯಾಗಿದ್ದೆ. ಅದರ ಮುಂದಿನ ವರ್ಷ ೨೦೧೭ರಲ್ಲಿ, ಅವರು ಬರೆದ ಎರಡು ಭಾಗಗಳ ಪುಸ್ತಕ ಸರಣಿಯನ್ನು ನಾನೇ ಲೋಕಾರ್ಪಣೆ ಮಾಡಿದ್ದೆ.

ಕೆಲವು ದಿನಗಳ ಹಿಂದಷ್ಟೇ ಪ್ರೊಫೆಸರ್ ಎಂ.ಎಸ್. ಸ್ವಾಮಿನಾಥನ್ ನಮ್ಮನ್ನು ಅಗಲಿದರು. ಕೃಷಿ ವಿಜ್ಞಾನದಲ್ಲಿ ಕ್ರಾಂತಿ ತಂದ ದಾರ್ಶನಿಕರೊಬ್ಬರನ್ನು ದೇಶವು ಕಳೆದುಕೊಂಡಿತು. ದೇಶಕ್ಕೆ ಅವರ ಕೊಡುಗೆಯು ಅಚ್ಚಳಿಯದೆ ಸುವರ್ಣಾಕ್ಷರಗಳಲ್ಲಿ ಸದಾ ಅಜರಾಮರವಾಗಲಿದೆ.
ಸ್ವಾಮಿನಾಥನ್ ಅವರು ಭಾರತದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ದೇಶದ ರೈತರು ಸಮೃದ್ಧಿಯ ಜೀವನವನ್ನು ನಡೆಸಬೇಕೆಂದು ಬಯಸಿದ್ದರು. ಶೈಕ್ಷಣಿಕವಾಗಿ ಪ್ರತಿಭಾವಂತರಾಗಿದ್ದ ಅವರಿಗೆ ಯಾವುದೇ ವೃತ್ತಿಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ, ೧೯೪೩ರ ಬಂಗಾಳದ ಕ್ಷಾಮ ಅವರ ಮೇಲೆ ಪ್ರಭಾವ ಬೀರಿ, ತಾವು ಮಾಡುವ ಒಂದೇ ಒಂದು ಕೆಲಸ ಯಾವುದಾದರೂ ಇದ್ದರೆ ಅದು ಕೃಷಿಯ ಅಧ್ಯಯನ ಎಂದು ಸ್ಪಷ್ಟ ಸಂಕಲ್ಪತೊಟ್ಟರು.
ವಯಸ್ಸಿನಲ್ಲಿ ಚಿಕ್ಕವರಾದರೂ ಅವರು ಡಾ. ನಾರ್ಮನ್ ಬೋರ್ಲಾಗ್ ಅವರೊಂದಿಗೆ ಸಂಪರ್ಕಕ್ಕೆ ಬಂದು, ಅವರ ಕೆಲಸವನ್ನು ಆಳವಾಗಿ ಅನುಸರಿಸಿದರು. ೧೯೫೦ರಲ್ಲಿ ಅಮೆರಿಕದಲ್ಲಿ ಬೋಧಕರಾಗುವ ಅವಕಾಶ ಒದಗಿಬಂದಿದ್ದನ್ನು ಅವರು ತಿರಸ್ಕರಿಸಿದರು.
ಸ್ವಾತಂತ್ರ‍್ಯದ ನಂತರದ ಮೊದಲ ಎರಡು ದಶಕಗಳಲ್ಲಿ, ಅಪಾರವಾದ ಸವಾಲುಗಳು ನಮ್ಮೆದುರಿಗಿದ್ದವು, ಅವುಗಳಲ್ಲಿ ಆಹಾರದ ಕೊರತೆಯೂ ಒಂದಾಗಿತ್ತು. ೧೯೬೦ರ ದಶಕದ ಆರಂಭದಲ್ಲಿ ಭಾರತವು ಕ್ಷಾಮದ ಕರಿಛಾಯೆಯೊಂದಿಗೆ ಹೋರಾಡುತ್ತಿತ್ತು. ಇದೇ ಸಮಯದಲ್ಲೇ ಪ್ರೊ. ಸ್ವಾಮಿನಾಥನ್ ಅವರ ಅಚಲ ಬದ್ಧತೆ ಮತ್ತು ದೂರದೃಷ್ಟಿಯು ಕೃಷಿ ಸಮೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಿತು. ಕೃಷಿ ಹಾಗೂ ಗೋಧಿ ತಳಿಯ ಅಭವೃದ್ಧಿಯಂತಹ ನಿರ್ದಿಷ್ಟ ಕ್ಷೇತ್ರಗಳಲ್ಲಿ ಅವರ ಮುಂಚೂಣಿ ಕೆಲಸವು ಗೋಧಿ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಯಿತು. ಇದರಿಂದಾಗಿ ಭಾರತವು ಆಹಾರ ಕೊರತೆಯ ದೇಶದ ಹಂತದಿಂದ ಸ್ವಾವಲಂಬಿ ರಾಷ್ಟ್ರವಾಗಿ ಪರಿವರ್ತನೆಯಾಯಿತು. ಈ ಅದ್ಭುತ ಸಾಧನೆಯಿಂದ ಅವರಿಗೆ “ಭಾರತೀಯ ಹಸಿರು ಕ್ರಾಂತಿಯ ಪಿತಾಮಹ” ಎಂಬ ಬಿರುದನ್ನು ಗಳಿಸಿಕೊಟ್ಟಿತು.
ಭಾರತದಲ್ಲಿ ಅಂತರ್ಗತವಾಗಿದ್ದ “ನಾವು ಸಹ ಮಾಡಬಲ್ಲೆವು” ಎಂಬ ಮನೋಭಾವದ ಒಂದು ಮುನ್ನೋಟವನ್ನು ಹಸಿರು ಕ್ರಾಂತಿಯು ಒದಗಿಸಿತು – ನಮಗೆ ಶತಕೋಟಿ ಸವಾಲುಗಳಿದ್ದರೇನಂತೆ, ಆ ಸವಾಲುಗಳನ್ನು ಪರಿಹರಿಸಲು ನಾವೀನ್ಯತೆಯ ಜ್ವಾಲೆಯೊಂದಿಗೆ ಶತಕೋಟಿ ಮನಸ್ಸುಗಳೂ ಇಲ್ಲಿವೆ ಎಂಬ ಆಶಾಕಿರಣವನ್ನು ಹೊರ ಹೊಮ್ಮಿಸಿತು. ಹಸಿರು ಕ್ರಾಂತಿ ಪ್ರಾರಂಭವಾದ ಐದು ದಶಕಗಳ ನಂತರ, ಭಾರತೀಯ ಕೃಷಿಯು ಹೆಚ್ಚು ಆಧುನಿಕ ಮತ್ತು ಪ್ರಗತಿಪರವಾಗಿದೆ. ಆದರೆ, ಇದಕ್ಕೆ ಸ್ವಾಮಿನಾಥನ್ ಅವರು ಹಾಕಿದ ಅಡಿಪಾಯವನ್ನು ಮರೆಯಲು ಸಾಧ್ಯವಿಲ್ಲ. ಹಲವು ವರ್ಷಗಳಲ್ಲಿ, ಅವರು ಆಲೂಗಡ್ಡೆ ಬೆಳೆಗಳ ಮೇಲೆ ಪರಿಣಾಮ ಬೀರುವ ಪರಾವಲಂಬಿ ಜೀವಿಗಳನ್ನು ಎದುರಿಸುವ ಕುರಿತು ಸಂಶೋಧನೆಯನ್ನು ಕೈಗೊಂಡರು. ಅವರ ಸಂಶೋಧನೆಯು ಆಲೂಗಡ್ಡೆ ಬೆಳೆಗಳಿಗೆ ಶೀತ ಹವಾಮಾನವನ್ನು ತಡೆದುಕೊಳ್ಳಲು ಅನುವು ಮಾಡಿಕೊಟ್ಟಿತು. ಅವರು ೧೯೯೦ರ ದಶಕದಿಂದಲೇ ಸಿರಿಧಾನ್ಯಗಳ ಬಗ್ಗೆ ಚರ್ಚೆಯನ್ನು ಪ್ರೋತ್ಸಾಹಿಸಿದ್ದರು.
ಪ್ರೊ. ಸ್ವಾಮಿನಾಥನ್ ಅವರೊಂದಿಗಿನ ವೈಯಕ್ತಿಕ ಒಡನಾಟಗಳು ಬಹಳ ವ್ಯಾಪಕವಾಗಿವೆ. ೨೦೦೧ರಲ್ಲಿ ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವು ಪ್ರಾರಂಭವಾದವು. ಆ ದಿನಗಳಲ್ಲಿ, ಗುಜರಾತ್ ತನ್ನ ಕೃಷಿ ಪರಿಣತಿಗೆ ಅಷ್ಟೊಂದು ಹೆಸರುವಾಸಿಯಾಗಿರಲಿಲ್ಲ. ಸತತ ಬರಗಾಲ, ಪ್ರಚಂಡ ಸೈಕ್ಲೋನ್ ಮತ್ತು ಭೂಕಂಪವು ರಾಜ್ಯದ ಬೆಳವಣಿಗೆಯ ಪಥದ ಮೇಲೆ ಪರಿಣಾಮ ಬೀರಿತ್ತು. ನಾವು ಪ್ರಾರಂಭಿಸಿದ ಅನೇಕ ಉಪಕ್ರಮಗಳಲ್ಲಿ, ಮಣ್ಣಿನ ಆರೋಗ್ಯ ಕಾರ್ಡ್ ಕೂಡ ಒಂದಾಗಿತ್ತು. ಇದು ಮಣ್ಣನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸಮಸ್ಯೆಗಳು ಉದ್ಭವಿಸಿದರೆ ಅವುಗಳನ್ನು ಪರಿಹರಿಸಲು ಅನುವು ಮಾಡಿಕೊಟ್ಟಿತು. ಈ ಯೋಜನೆಯ ಹಿನ್ನೆಲೆಯಲ್ಲಿ ಪ್ರೊ. ಸ್ವಾಮಿನಾಥನ್ ಅವರನ್ನು ಭೇಟಿಯಾಗಿದ್ದೆ. ಅವರು ಯೋಜನೆಯನ್ನು ಶ್ಲಾಘಿಸಿದರು ಜೊತೆಗೆ, ಅದಕ್ಕಾಗಿ ತಮ್ಮ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ಹಂಚಿಕೊಂಡರು. ಈ ಯೋಜನೆಯ ಬಗ್ಗೆ ಸಂದೇಹ ಹೊಂದಿದ್ದವರಿಗೆ ಮನವರಿಕೆ ಮಾಡಲು ಅವರ ಅನುಮೋದನೆಯೊಂದೇ ಸಾಕಾಗಿತ್ತು. ಇದು ಅಂತಿಮವಾಗಿ ಗುಜರಾತ್‌ನ ಕೃಷಿ ಯಶಸ್ಸಿಗೆ ವೇದಿಕೆಯನ್ನು ನಿರ್ಮಿಸಿತು.
ರೈತರು ಜಗತ್ತನ್ನು ಒಟ್ಟಿಗೆ ಬೆಸೆದು ಹಿಡಿದಿರುವ ಬಂಧಕ ಶಕ್ತಿ ಎಂದು ಕುರಾಲ್ ಕೃಷಿಕರನ್ನು ಬಣ್ಣಿಸುತ್ತದೆ. ಏಕೆಂದರೆ ಎಲ್ಲರನ್ನೂ ಪೋಷಿಸುವುದು ರೈತರೇ. ಪ್ರೊ. ಸ್ವಾಮಿನಾಥನ್ ಅವರು ಈ ತತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಬಹಳಷ್ಟು ಜನರು ಅವರನ್ನು ಕೃಷಿ ವಿಜ್ಞಾನಿ ಎಂದು ಕರೆಯುತ್ತಾರೆ. ಆದರೆ, ಅವರು ಅದಕ್ಕೂ ಮಿಗಿಲಾದವರಾಗಿದ್ದರು. ಅವರು ನಿಜವಾದ `ಕಿಸಾನ್ ವೈಜ್ಞಾನಿಕ್’ – ರೈತರ ವಿಜ್ಞಾನಿ ಆಗಿದ್ದರು. ಅವರ ಹೃದಯದಲ್ಲಿ ಒಬ್ಬ ರೈತನಿದ್ದ. ಅವರ ಕಾರ್ಯ ಮತ್ತು ಕೃತಿಗಳ ಯಶಸ್ಸು ಕೇವಲ ಅವರ ಶೈಕ್ಷಣಿಕ ಉತ್ಕೃಷ್ಟತೆಗಷ್ಟೇ ಸೀಮಿತವಾಗಿಲ್ಲ; ಪ್ರಯೋಗಾಲಯಗಳ ಹೊರಗೆ, ಹೊಲ-ಗದ್ದೆಗಳಲ್ಲಿ ಅವುಗಳು ಬೀರಿದ ಪರಿಣಾಮದಲ್ಲಿ ಇದು ಅಡಗಿದೆ. ಸ್ವಾಮಿನಾಥನ್ ಅವರು ಕೈಗೊಂಡ ಕಾರ್ಯವು ವೈಜ್ಞಾನಿಕ ಜ್ಞಾನ ಮತ್ತು ಅದರ ಪ್ರಾಯೋಗಿಕ ಅನ್ವಯದ ನಡುವಿನ ಅಂತರವನ್ನು ಕಡಿಮೆ ಮಾಡಿತು. ಮಾನವ ಪ್ರಗತಿ ಮತ್ತು ಪರಿಸರ ಸುಸ್ಥಿರತೆಯ ನಡುವಿನ ಸೂಕ್ಷ್ಮ ಸಮತೋಲನವನ್ನು ಒತ್ತಿಹೇಳುವ ಮೂಲಕ ಅವರು ಸುಸ್ಥಿರ ಕೃಷಿಯನ್ನು ನಿರಂತರವಾಗಿ ಪ್ರತಿಪಾದಿಸಿದರು.
ಸ್ವಾಮಿನಾಥನ್ ಅವರು ನಾವೀನ್ಯತೆ ಮತ್ತು ಮಾರ್ಗದರ್ಶನದ ಪರಾಕಾಷ್ಠೆಯಾಗಿ ನಿಂತಿದ್ದಾರೆ. ೧೯೮೭ರಲ್ಲಿ ವಿಶ್ವ ಆಹಾರ ಪ್ರಶಸ್ತಿಗೆ ಭಾಜನರಾದಾಗ, ಈ ಪ್ರತಿಷ್ಠಿತ ಗೌರವದ ಮೊದಲ ಪುರಸ್ಕೃತರೆನಿಸಿದ ಅವರು ಬಹುಮಾನವಾಗಿ ಬಂದ ಹಣವನ್ನು ಲಾಭರಹಿತ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲು ಬಳಸಿದರು. ಇಲ್ಲಿಯವರೆಗೆ, ಇದು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸವನ್ನು ಕೈಗೊಂಡಿದೆ. ಅವರು ಅಸಂಖ್ಯಾತ ಮನಸ್ಸುಗಳನ್ನು ಪೋಷಿಸಿದ್ದಾರೆ, ಅವರಲ್ಲಿ ಕಲಿಕೆ ಮತ್ತು ನಾವೀನ್ಯತೆಯ ಉತ್ಸಾಹವನ್ನು ತುಂಬಿದ್ದಾರೆ. ಅವರ ಜೀವನವು ಜ್ಞಾನ, ಮಾರ್ಗದರ್ಶನ ಮತ್ತು ನಾವೀನ್ಯತೆಯ ಅನಂತ ಶಕ್ತಿಯನ್ನು ನಮಗೆ ನೆನಪು ಮಾಡುತ್ತದೆ. ಅವರು ವಿವಿಧ ಸಂಸ್ಥೆಗಳ ನಿರ್ಮಾತೃವೂ ಆಗಿದ್ದರು, ಅಗಾಧ ಸಂಶೋಧನೆ ನಡೆಯುವ ಅನೇಕ ಕೇಂದ್ರಗಳನ್ನು ಅವರು ಹೊಂದಿದ್ದರು. ಮನಿಲಾದ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ೨೦೧೮ರಲ್ಲಿ ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರವನ್ನು ತೆರೆಯಲಾಯಿತು.
ಅವರು ತಾವು ಅಂದುಕೊಂಡಿದ್ದನ್ನು ಅಸಾಧಾರಣ ರೀತಿಯಲ್ಲಿ, ನವೀನ ರೀತಿಯಲ್ಲಿ ಮತ್ತು ಭಾವೋತ್ಕರ್ಷದಿಂದ ಮಾಡಿದರು. ನಾವು ಕೃಷಿ ನಾವೀನ್ಯತೆ ಮತ್ತು ಸುಸ್ಥಿರತೆಯ ಹಾದಿಯಲ್ಲಿ ಸಾಗುತ್ತಿರುವ ಈ ಹೊತ್ತಿನಲ್ಲಿ ಅವರ ಕೊಡುಗೆಗಳು ನಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತವೆ. ಅವರು ಪ್ರೀತಿಸುತ್ತಿದ್ದ ತತ್ವಗಳಿಗೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತಲೇ ಇರಬೇಕು, ರೈತರ ಹಿತಕ್ಕಾಗಿ ಹೋರಾಡಬೇಕು ಮತ್ತು ವೈಜ್ಞಾನಿಕ ಆವಿಷ್ಕಾರದ ಫಲಗಳು ನಮ್ಮ ಕೃಷಿ ವಿಸ್ತಾರದ ಬೇರುಗಳನ್ನು ತಲುಪುವಂತೆ ಖಾತರಿಪಡಿಸಬೇಕು. ಮುಂದಿನ ಪೀಳಿಗೆಗಾಗಿ ಬೆಳವಣಿಗೆ, ಸುಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಬೇಕು.