ಸ್ವಾಮೀಜಿ ಹೇಳಿದಾಕ್ಷಣ ಸಿಎಂ ಬದಲಾವಣೆಯಾಗಲ್ಲ

Advertisement

ದಾವಣಗೆರೆ: ಸ್ವಾಮೀಜಿಗಳು ಹೇಳಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಾಡ ಪ್ರಭು ಕೆಂಪೇಗೌಡ ಜಯಂತಿಯಲ್ಲಿ ಒಕ್ಕಲಿಗ ಸಮಾಜದ ಶ್ರೀ ಚಂದ್ರಶೇಖರ ಸ್ವಾಮೀಜಿ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಸಿಎಂ ಮಾಡಬೇಕು. ಸಿದ್ದರಾಮಯ್ಯ ಸ್ಥಾನ ಬಿಟ್ಟು ಕೊಡಬೇಕೆಂಬ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

ಸ್ವಾಮೀಜಿಗಳು ಹೇಳಿದರೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವುದಕ್ಕೆ ಆಗದು. ನಮ್ಮ ಪಕ್ಷದ ಹೈಕಮಾಂಡ್ ಹೇಳಿದಂತೆ ಆಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಚನ್ನಾಗಿಯೇ ಆಡಳಿತ ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಏನೇ ಸಮಸ್ಯೆಯಾದರೂ ಸರಿಯಾಗಿ ಉತ್ತರ ನೀಡುತ್ತಾರೆ. ಮುಖ್ಯಮಂತ್ರಿಗಳು ಸಹ ಹೈಕಮಾಂಡ್ ಪ್ರಕಾರ ನಡೆದುಕೊಳ್ಳುತ್ತಾರೆ ಎಂದು ಅವರು ಸಿಎಂ ಪರ ಬ್ಯಾಟ್ ಬೀಸಿದರು.

ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಉತ್ತಮ ಕೆಲಸ ಆಗಿವೆ.ಗ್ಯಾರಂಟಿ ಯೋಜನೆ ಮೂಲಕ ಜನಪ್ರಿಯ ಮುಖ್ಯಮಂತ್ರಿಯಾಗಿ ಹೆಸರು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾಗಿ ಕೆಲಸ ಮಾಡಿಲ್ಲ ಅಂತಾ ಹೇಳಿದ್ದು ಯಾರು? ಯಾರೇನೇ ಹೇಳಿದರೂ ಹೈಕಮಾಂಡ್ ಮುಂದೆ ಏನೂ ನಡೆಯಲ್ಲ ಎಂದರು.

ಜಾತಿವಾರು ಉಪ ಮುಖ್ಯಮಂತ್ರಿ ವಿಚಾರ ಅದೆಲ್ಲಾ ಆಗುವುದಲ್ಲ, ಮಾಡುವುದಲ್ಲ. ಅದನ್ನೆಲ್ಲಾ ಮಾಡಿದರೆ ಹೈಕಮಾಂಡ್ ಮಾಡಬೇಕಷ್ಟೆ. ಅವನಿಗೇನು(ಚನ್ನಗಿರ ಶಾಸಕ ಬಸವರಾಜ ವಿ.ಶಿವಗಂಗಾ) ಗೊತ್ತು? ಹೊಸ ಶಾಸಕ. ಅವನಿಗೆ ಯಾರು ಬೇಕೋ ಅಂತಹವರ ಪರ ಮಾತನಾಡುತ್ತಾನೆ. ಅವನಿಗೆ ಯಾರೋ ಚಾರ್ಜ್ ಮಾಡಿ, ಹಿಂಗೇ ಹೇಳು ಅಂತಾ ಹೇಳಿರಬೇಕಷ್ಟೇ ಎಂದು ಶಾಮನೂರು ಶಿವಶಂಕರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.