ಬೆಂಗಳೂರು: ನರೇಂದ್ರ ಮೋದಿ ಅವರೇ ತನಿಖೆ ನಡೆಸುವ ಧೈರ್ಯ ತೋರಿಸುವಿರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಕುರಿತು ಪ್ರಶ್ನಿಸಿ ಸರಣಿ ಟ್ವೀಟ್ ಮಾಡಿರುವ ಅವರು, ನರೇಂದ್ರ ಮೋದಿ ಅವರೇ, ಹಿಂದಿನ ನಿಮ್ಮ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯದ ಗುತ್ತಿಗೆದಾರರು ಮಾಡಿರುವ 40% ಕಮಿಷನ್ ಆರೋಪದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯನ್ನು ರಚನೆ ಮಾಡುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ. ನಿಮ್ಮದೇ ಸರ್ಕಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಎಜಿ ನೀಡಿರುವ ವರದಿಯ ಬಗ್ಗೆ ನೀವು ಯಾವಾಗ ತನಿಖೆ ನಡೆಸಿ ‘ನಾ ಖಾವೂಂಗಾ ನಾ ಖಾನೆ ದೂಂಗಾ’ ಎಂಬ ನಿಮ್ಮ ಘೋಷಣೆಗೆ ಅನುಗುಣವಾಗಿ ನುಡಿದಂತೆ ನಡೆಯುವಿರಿ? “ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಮೂಗಿನಡಿಯಲ್ಲಿಯೇ ದ್ವಾರಕಾ ಎಕ್ಸ್‌ಪ್ರೆಸ್ ಹೈವೇ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ 250 ಕೋಟಿ ರೂ. ಕೊಳ್ಳೆ ಹೊಡೆಯಲಾಗಿದೆ, 5 ಟೋಲ್ ಪ್ಲಾಜಾಗಳಲ್ಲಿ 132 ಕೋಟಿ ಹಣವನ್ನು ಲೂಟಿ ಮಾಡಲಾಗಿದೆ, ನೀವು ಪದೇ ಪದೇ ಉಲ್ಲೇಖಿಸುವ ‘ಆಯುಷ್ಮಾನ್ ಭಾರತ್’ ಯೋಜನೆಯಲ್ಲಂತೂ ಮೃತಪಟ್ಟ ಸುಮಾರು 88,೦೦೦ ಫಲಾನುಭವಿಗಳ ಹೆಸರಿನಲ್ಲಿ ಹೊಸದಾಗಿ ಬಿಲ್‌ಗಳನ್ನು ಕ್ಲೈಮ್ ಮಾಡಿ ಹಣ ನುಂಗಿ ಹಾಕಲಾಗಿದೆ ಎಂದು ಸಿಎಜಿ ವರದಿ ಮಾಡಿದೆ. ಇದರ ಬಗ್ಗೆ ತನಿಖೆ ನಡೆಸುವ ಧೈರ್ಯ ತೋರಿಸುವಿರಾ? ನೀವು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅಧ್ಯಕ್ಷರೂ ಆಗಿದ್ದೀರಿ. ಭಾರತ್ ಮಾಲಾ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ ರೂ. 15.37 ಕೋಟಿ ಗಳಿಂದ ರೂ. 32 ಕೋಟಿ ವರೆಗೆ ಹೆಚ್ಚುವರಿ ಖರ್ಚು ತೋರಿಸಲಾಗಿದೆ ಎಂದು ಸಿಎಜಿ ವರದಿ ಮಾಡಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಸಂಪರ್ಕ ವ್ಯವಸ್ಥೆ ಸುಧಾರಣೆಯ ಅತಿ ಪ್ರಚಾರದ ಭಾರತ ಮಾಲಾ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿಯೇ ಅಕ್ರಮ ನಡೆದಿದೆ ಮತ್ತು ಆ ಯೋಜನೆ ಬಗೆಗೆ ವಿಸ್ತೃತವಾದ ವರದಿಯೇ ಸಲ್ಲಿಕೆಯಾಗಿಲ್ಲ. ಹೀಗಿದ್ದರೂ 3,500 ಕೋಟಿ ಹಣವನ್ನು ವರ್ಗಾಯಿಸಲಾಗಿದೆ ಎಂದು ಸಿಎಜಿ ಲೋಪವನ್ನು ಎತ್ತಿ ತೋರಿಸಿದೆ. ಈ ಬಗ್ಗೆ ನಿಮ್ಮ ಮೌನವನ್ನು ಅಕ್ರಮದಲ್ಲಿ ಶಾಮೀಲಾಗಿದ್ದೀರಿ ಎಂದು ವ್ಯಾಖ್ಯಾನಿಸಬಹುದೇ? ದಿಲ್ಲಿ-ಗುರುಗ್ರಾಮ ಗಡಿಯಲ್ಲಿರುವ ದ್ವಾರಕಾ ಎಕ್ಸ್‌ಪ್ರೆಸ್ ವೇ ಯೋಜನೆಯಲ್ಲಿ ಅಕ್ರಮ ನಡೆದಿರುವ ವರದಿಗಳಿವೆ. ಪ್ರತಿ ಕಿ.ಮೀ.ಗೆ 18.2 ಕೋಟಿ ರೂ.ಗಳಿಂದ 251 ಕೋಟಿ ರೂ.ಗಳ ವರಗೆ ನಿರ್ಮಾಣ ವೆಚ್ಚವನ್ನು ಅವೈಜ್ಞಾನಿಕ ರೀತಿಯಲ್ಲಿ ಏರಿಸಲಾಗಿರುವ ಆರೋಪಗಳಿವೆ. ಈ ಬಗ್ಗೆ ಸಮಗ್ರ ರೂಪದ ತನಿಖೆಯ ಅಗತ್ಯ ಇದೆ ಎಂದು ನಿಮಗೆ ಅನಿಸುವುದಿಲ್ಲವೇ? ನೀವು I.N.D.I.A ಒಕ್ಕೂಟವನ್ನು ಭ್ರಷ್ಟರ ಒಕ್ಕೂಟವೆಂದು ಸುಳ್ಳು ಆರೋಪ ಹೊರಿಸಿ ಸಂಭ್ರಮಿಸುತ್ತೀರಿ, ನಿಮ್ಮದೇ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಸಿಎಜಿ ವರದಿಯು ಬಟಾಬಯಲು ಮಾಡಿದ್ದರೂ ಕಣ್ಣು, ಬಾಯಿಮುಚ್ಚಿ ಕೂತಿದ್ದೀರಿ. ಇದು ಆತ್ಮವಂಚಕ ನಡವಳಿಕೆ ಅಲ್ಲವೇ? ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ನಿಮ್ಮದೇ ಪರಿವಾರ ಆರೋಪಗಳನ್ನು ಮಾಡತೊಡಗಿದೆ. ‘ಪಿಎಂ ಕೇರ್ಸ್ ಫಂಡ್’ ಅನ್ನು ಸರ್ಕಾರದ್ದೆಂದು ಭಾವಿಸಿ ಮುಗ್ಧ ಜನತೆ ಅಪಾರ ಪ್ರಮಾಣದಲ್ಲಿ ಹಣವನ್ನು ದಾನವಾಗಿ ನೀಡುತ್ತಿದ್ದಾರೆ. ಆದರೆ, ನಿಮ್ಮ ಸರ್ಕಾರ ಅದನ್ನು ಸಾರ್ವಜನಿಕ ದತ್ತಿ ಟ್ರಸ್ಟ್ ಎಂದು ಹೆಸರಿಸಿ ಅದನ್ನು ಮಾಹಿತಿ ಹಕ್ಕಿನಿಂದ ಹೊರಗಿರಿಸಿರಿದೆ. ಈ ದುಡ್ಡಿನಿಂದ ಯಾರಿಗೆ ಲಾಭವಾಗುತ್ತಿದೆ ಹೇಳಬಲ್ಲಿರಾ? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.