ಹಠಾತ್ ಕಳಚಿ ಬಿದ್ದ ಕಬ್ಬಿಣದ ಪಟ್ಟಿ

Advertisement

ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯ ರೈಲ್ವೆ ಸೇತುವೆ ಕೆಳಭಾಗದಲ್ಲಿ ಭಾರಿ ವಾಹನ ಸಂಚಾರ ನಿಯಂತ್ರಣಕ್ಕೆ ಹಾಕಿದ್ದ ಕಬ್ಬಿಣದ ಪಟ್ಟಿ ಮಂಗಳವಾರ ಮಧ್ಯಾಹ್ನ ಹಠಾತ್ ಕಳಚಿ ಬಿದ್ದಿದ್ದು, ವಾಹನ ಸವಾರರು ಅಚ್ಚರಿ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸಂಭವಿಸಬಹುದಾದ ಅನಾಹುತ ಸ್ವಲ್ಪದಲ್ಲಿಯೇ ತಪ್ಪಿದೆ. ಕಬ್ಬಿಣದ ಪಟ್ಟಿ ಕಳಚಿ ಬೀಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಬ್ಬಳ್ಳಿ ನಗರದೊಳಗಡೆಯಿಂದ ಗದಗ ಕಡೆಗೆ ವಾಹನಗಳು ಸಾಗುವಾಗ ಲಾರಿಯೊಂದು ಕಬ್ಬಿಣದ ಪಟ್ಟಿಯ ಹತ್ತಿರ ಸಾಗುತ್ತದೆ. ಈ ಲಾರಿ ಸಾಗುತ್ತಿದ್ದುದರಿಂದ ರಸ್ತೆ ದಾಟಬೇಕಾದ ದ್ವಿಚಕ್ರವಾಹನ, ಕಾರ್, ಬಸ್ ನಿಲುಗಡೆ ಮಾಡಿದ್ದವು. ಅತ್ತ ಲಾರಿ ಮುಂದೆ ಸಾಗುತ್ತಿದ್ದಂತೆಯೇ ಕಬ್ಬಿಣದ ಪಟ್ಟಿ ಕಳಚಿ ಬಿದ್ದಿದೆ. ಇನ್ನೇನು ದ್ವಿಚಕ್ರವಾಹನ ಸವಾರು ಸಾಗಬೇಕು ಎನ್ನುವಷ್ಟರಲ್ಲಿ ಕಬ್ಬಿಣದ ಪಟ್ಟಿ ಕಳಚಿ ಬಿದ್ದಿದ್ದನ್ನು ಕಂಡು ಬ್ರೇಕ್ ಹಾಕಿ ನಿಂತಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ವಾಹನಗಳು ಮುಂದೆ ಸಾಗಿವೆ.
ಕಬ್ಬಿಣದ ಪಟ್ಟಿ ಅಳವಡಿಸಿದ ಕಂಬ ನೆಲಮಟ್ಟದಲ್ಲಿನ ನಟ್ ಬೋಲ್ಟ್ ತುಕ್ಕು ಹಿಡಿದು ಕಳಚಿ ಬಿದ್ದಿದೆ ಎನ್ನಲಾಗಿದೆ. ಸ್ಥಳಕ್ಕೆ ಡಿಸಿಪಿ ಗೋಪಾಲ ಬ್ಯಾಕೋಟ್, ಸಂಚಾರ ಠಾಣೆ ಅಧಿಕಾರಿ ಕಾಡದೇವರಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈಲ್ವೆ, ಪೊಲೀಸ್ ಅಧಿಕಾರಿಗಳು ಕಾಲ ಕಾಲಕ್ಕೆ ಪರಿಶೀಲಿಸಲಿ
ಅತ್ಯಂತ ಜನದಟ್ಟಣೆಯ ಪ್ರದೇಶ ಹಾಗೂ ಹುಬ್ಬಳ್ಳಿ-ಗದಗ ಎನ್‌ಎಚ್-63 ರಸ್ತೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನಡೆದ ಬಹುದೊಡ್ಡ ಘಟನೆಯಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆಯೂ ಇದೇ ರೀತಿ ಕಬ್ಬಿಣದ ಪಟ್ಟಿ ಭಾರಿ ವಾಹನ ನಸುಕಿನ ಜಾವ ಸಾಗುವಾಗ ಇದೇ ರೈಲ್ವೆ ಸೇತುವೆ ಬಳಿ ಕಳಚಿ ಬಿದ್ದಿತ್ತು. ಇದು ಎರಡನೇ ಬಾರಿಯಾಗಿದ್ದು, ರೈಲ್ವೆ ಇಲಾಖೆ ಅಧಿಕಾರಿಗಳು, ಸಂಚಾರ ಠಾಣೆ ಅಧಿಕಾರಿಗಳು ಕಾಲ ಕಾಲಕ್ಕೆ ಪರಿಶೀಲನೆ ನಡೆಸಿದ್ದರೆ ಇಂತಹ ಅವಘಡಗಳು ಆಗುವುದಿಲ್ಲ. ಇನ್ನು ಮುಂದೆಯಾದರೂ ಪರಿಶೀಲನೆ ನಡೆಸಬೇಕು ಎಂದು ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು, ವಾಹನ ಸವಾರರು ಆಗ್ರಹಿಸಿದರು.