ಹಣ ಪಡೆದು ಟಿಕೆಟ್ ನೀಡುವ ಸಂಸ್ಕ್ರತಿ ಬಿಜೆಪಿಯಲ್ಲಿಲ್ಲ

ಸಿಟಿ ರವಿ
Advertisement

ಮಂಗಳೂರು: ಹಣ ಪಡೆದು ಚುನಾವಣೆಗೆ ಟಿಕೆಟ್ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಹಣದಲ್ಲೇ ಎಲ್ಲವನ್ನೂ ಅಳೆಯುವುದಾದರೆ ಸುಳ್ಯದಲ್ಲಿ ಸಾಮಾನ್ಯ ಕಾರ್ಯಕರ್ತೆ, ಬಡ ಮಹಿಳೆಯಾದ ಭಾಗೀರಥಿ ಮುರುಳ್ಯಗೆ ಟಿಕೆಟ್ ಸಿಗುತ್ತಿರಲಿಲ್ಲ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ ನಾಯಕರಾಗಿ ಮುಂದೆ ಬರುತ್ತಿರಲಿಲ್ಲ ಎಂದು ಬಿಜೆಪಿ ನಾಯಕ ಸಿ. ಟಿ. ರವಿ ಹೇಳಿದ್ದಾರೆ.
ಚೈತ್ರಾ ಕುಂದಾಪುರ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ. ಗೋವಿಂದ ಬಾಬು ಪೂಜಾರಿಗೆ ಸ್ವಲ್ಪ ಎಚ್ಚರ ವಹಿಸಿ ವಿಚಾರಿಸುತ್ತಿದ್ದರೆ ಈ ರೀತಿ ಮೋಸ ಹೋಗಲು ಸಾಧ್ಯವಿರುತ್ತಿರಲಿಲ್ಲ. ಚೈತ್ರಾ ಕುಂದಾಪುರ ಪ್ರಕರಣದಲ್ಲಾಗಿರುವಂತೆ ಬಿಜೆಪಿಯಲ್ಲಿ ಹಣ ಪಡೆದು ಟಿಕೆಟ್ ನೀಡುವ ಪದ್ಧತಿ ಇಲ್ಲ. ಯಾವುದೇ ಹಣ ಬಲ ಇಲ್ಲದ ನೂರಾರು ಕಾರ್ಯ ಕರ್ತರು ಜನ ಪ್ರತಿನಿಧಿಗಳಾಗಿದ್ದಾರೆ. ಬೈಂದೂರಿನ ಶಾಸಕರು, ಸುಳ್ಯ ಶಾಸಕರು ಯಾವುದೇ ಹಣ ಬಲದಿಂದ ಶಾಸಕರಾದವರಲ್ಲ. ಆದರೆ ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಜನರಿಗೆ ಸತ್ಯ ಸಂಗತಿ ತಿಳಿಯಬೇಕಾದರೆ ಸಮಗ್ರ ತನಿಖೆ ಯಾಗಬೇಕು ಎಂದು ಒತ್ತಾಯಿಸಿದ್ದಾರೆ
ಹಣವೇ ಬಿಜೆಪಿಯಲ್ಲಿ ಪ್ರಧಾನ ಅಲ್ಲ. ನೂರಾರು ಬಡ ಕಾರ್ಯಕರ್ತರು ನಮ್ಮಲ್ಲಿ ಎಂ.ಪಿ, ಎಂ.ಎಲ್.ಎ ಆಗಿದ್ದಾರೆ. ಇಲ್ಲಿ ಗೋವಿಂದ ಬಾಬು ಪೂಜಾರಿಯನ್ನು ಮೋಸದ ಕೂಪಕ್ಕೆ ತಳ್ಳಲಾಗಿದೆ. ಬುದ್ದಿವಂತರ ಜಿಲ್ಲೆ ಎನಿಸಿಕೊಂಡ ದ.ಕ ಮತ್ತು ಉಡುಪಿಯ ಜನರೇ ಮೋಸ ಹೋಗಿದ್ದಾರೆ ಎಂದಿದ್ದಾರೆ.